ಸರ್ಕಾರಿ ವೈದ್ಯರ ಯಡವಟ್ಟು; ಹದಗೆಟ್ಟ ಮಹಿಳೆಯ ಆರೋಗ್ಯ

| Published : Mar 11 2024, 01:23 AM IST

ಸರ್ಕಾರಿ ವೈದ್ಯರ ಯಡವಟ್ಟು; ಹದಗೆಟ್ಟ ಮಹಿಳೆಯ ಆರೋಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಶಸ್ತ್ರ ಚಿಕಿತ್ಸೆ ನಿರ್ವಹಿಸುವ ವೇಳೆ ರೋಗಿಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವೈದ್ಯರ ನಿರ್ಲಕ್ಷ್ಯದಿಂದ ಈ ಬಡ ಮಹಿಳೆಯ ಪ್ರಾಣಕ್ಕೆ ಅಪಾಯ ಬಂದೊದಗಿದೆ, ಇವರ ಅಳಲು ಕೇಳುವವರು ಯಾರು? ಇದಕ್ಕೆಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೊಣೆಗಾರರಾಗಲಿದ್ದಾರೆಂದು ತಾಲೂಕು ಜೆಡಿಎಸ್‌ ರೈತ ಘಟಕದ ಅದ್ಯಕ್ಷ ಗಂಗಾಧರ್‌ ನಾಯ್ಡು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಗರ್ಭಕೋಶ ಸಮಸ್ಯೆಯಿಂದ ಪಾವಗಡದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕರ್ತವ್ಯ ನಿರತ ವೈದ್ಯರೊಬ್ಬರ ಉದಾಸೀನತೆ ಹಾಗೂ ಬೇಕಾಬಿಟ್ಟಿ ಶಸ್ತ್ರ ಚಿಕಿತ್ಸೆಯ ಪರಿಣಾಮ ಅಪರೇಷನ್ ಯಶಸ್ಸು ಕಾಣದೇ ಪ್ರಾಣಕ್ಕೆ ಕುತ್ತು ಬಂದಿದೆ ಎಂದು ತಾಲೂಕಿನ ಶೈಲಾಪುರ ಗ್ರಾಮದ ಸಂತ್ರಸ್ತ ಮಹಿಳೆ ಗಂಗಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮಹಿಳೆ ಗಂಗಮ್ಮ ಮಾತನಾಡಿ, ಶೈಲಾಪುರ ಗ್ರಾಮದ ವಾಸಿಯಾದ ನಾನು ಗರ್ಭಕೋಶದ ಸಮಸ್ಯೆಯಿಂದ ಕಳೆದ 2023ರ ಡಿಸೆಂಬರ್‌ 12ರಂದು ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ಹೆರಿಗೆ ವಿಭಾಗದ ವೈದ್ಯೆ ಡಾ.ಪೂಜಾ ನನ್ನನ್ನು ಪರೀಕ್ಷಿಸಿದ್ದು, ತೀವ್ರ ಸಮಸ್ಯೆಯಿದೆ. ಕೂಡಲೇ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ.

ವೈದ್ಯೆಯ ಸಲಹೆ ಮೇರೆಗೆ ಒಪ್ಪಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಾಯಿತು. ಈ ವೇಳೆ ಬಡವರೆಂದು ಉದಾಸೀನತೆ ತೋರಿ ಶಸ್ತ್ರಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಮೂತ್ರಪಿಂಡದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ತೀವ್ರ ನೋವು ಕಾಣಿಸಿಕೊಂಡಿತ್ತು,

ಮರುದಿನ ಸರ್ಕಾರಿ ಆಸ್ಪತ್ರೆಯ ಪರೀಕ್ಷಿಸಿದ್ದ ಡಾ.ಪೂಜಾರವರನ್ನು ಭೇಟಿಯಾಗಿ ಹೊಟ್ಟೆನೋವಿನ ಸಮಸ್ಯೆಯ ಬಗ್ಗೆ ವಿವರಿಸಲಾಯಿತು. ಮತ್ತೆ ಪರೀಕ್ಷಿಸಿದ ಡಾ,ಪೂಜಾ, ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಅಪಾಯವಿದೆ ಎಂದು ಸೂಚಿಸಿ, ಸಲಹೆ ನೀಡಿದ ಮೇರೆಗೆ ತುರ್ತುವಾಹನದಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದೆ.

ನಂತರ ಅಲ್ಲಿನ ವೈದ್ಯರು ಪರೀಕ್ಷಿಸಿ, ಗರ್ಭ ಕೋಶದ ಶಸ್ತ್ರಚಿಕಿತ್ಸೆ ವೇಳೆ ಬೇಜವಾಬ್ದಾರಿ ಹಾಗೂ ಆಜಾಗರುಕತೆಯ ಪರಿಣಾಮ ಮೂತ್ರ ಚೀಲ ಅಪಾಯದಲ್ಲಿದ್ದು, ಮೂತ್ರ ಪಿಂಡ ಶುದ್ದೀಕರಿಸಲಾಗುತ್ತಿಲ್ಲ. ಇದರಿಂದ ಪ್ರಾಣಕ್ಕೆ ತೊಂದರೆಯಾಗುವ ಸಾಧ್ಯತೆಯಿರುವುದಾಗಿ ಅವರು ನಮ್ಮ ಫೋಷಕರಿಗೆ ತಿಳಿಸಿದ್ದಾರೆ. ಮನವಿ ಮಾಡಿಕೊಂಡ ಹಿನ್ನೆಲೆ ಗರ್ಭಕೋಶದ ಶಸ್ತ್ರಚಿಕಿತ್ಸೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ.ಆಗ ಶಸ್ತ್ರಚಿಕಿತ್ಸೆಯ ವಾರ್ಡ್‌ಗೆ ದಾಖಲಾಗಿದ್ದು, ನಾಲ್ಕು ದಿನಗಳ ಬಳಿಕ ಪರೀಕ್ಷಿಸಿದ ಅಲ್ಲಿನ ವೈದ್ಯರು ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡಿರುತ್ತಾರೆ. ಇದಾದ ಒಂದು ತಿಂಗಳು 10 ದಿನಗಳ ಬಳಿಕ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದು, ಮತ್ತೆ ಆದೇ ವಾಣಿವಿಲಾಸ ಆಸ್ಪತ್ರೆಗೆ ತೆರಳಿ ಚೆಕಪ್‌ ಮಾಡಿಸಿಕೊಂಡಾಗ ಪರಿಶೀಲಿಸಿದ ವೈದ್ಯರು, ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಈಗ ಮೂತ್ರ ವಿಸರ್ಜನೆಗೆ ಪೈಪ್‌ ಹಾಕಿದ್ದು ನನ್ನ ಜೀವನ ಆತಂತ್ರ ಸ್ಥಿತಿಯಲ್ಲಿದೆ. ಆಸ್ಪತ್ರೆಯ ಖರ್ಚು, ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ನನಗೇನಾದರೂ ಆದರೆ ನನ್ನ ಕುಟುಂಬ ಅನಾಥವಾಗುತ್ತದೆ. ನನಗೆ ನ್ಯಾಯ ಕಲ್ಪಿಸಿ ಎಂದು ಸಂತ್ರಸ್ತ ಮಹಿಳೆ ಅಂಗಲಾಚಿಕೊಂಡರು.

ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮೀನಗುಂಟೆನಹಳ್ಳಿ ನರಸಿಂಹಪ್ಪ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಪೂಜಾರ ನಿರ್ಲಕ್ಷ್ಯದಿಂದ ಬಡ ಮಹಿಳೆಯೊಬ್ಬರ ಗರ್ಭಕೋಶದ ಶಸ್ತ್ರಚಿಕಿತ್ಸೆ ಯಶಸ್ಸು ಕಾಣದೇ ಪದೇ ಪದೇ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸ್ಥಿತಿ ಎದುರಾಗಿದೆ. ಈಗ ತೊಂದರೆಯಲ್ಲಿರುವ ಆಕೆಯನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.

ತಾಲೂಕು ಜೆಡಿಎಸ್‌ ರೈತ ಘಟಕದ ಅದ್ಯಕ್ಷ ಗಂಗಾಧರ್‌ ನಾಯ್ಡು ಮಾತನಾಡಿ, ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಶಸ್ತ್ರ ಚಿಕಿತ್ಸೆ ನಿರ್ವಹಿಸುವ ವೇಳೆ ರೋಗಿಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವೈದ್ಯರ ನಿರ್ಲಕ್ಷ್ಯದಿಂದ ಈ ಬಡ ಮಹಿಳೆಯ ಪ್ರಾಣಕ್ಕೆ ಅಪಾಯ ಬಂದೊದಗಿದೆ, ಇವರ ಅಳಲು ಕೇಳುವವರು ಯಾರು? ಇದಕ್ಕೆಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೊಣೆಗಾರರಾಗಲಿದ್ದಾರೆಂದು ಅವರು ಆರೋಪಿಸಿದ್ದಾರೆ.

ದಲಿತ ಮುಖಂಡ ಬ್ಯಾಡನೂರು ಉಗ್ರಪ್ಪ, ತಿಮ್ಮಯ್ಯ ಮತ್ತಿತರ ಮುಖಂಡರಿದ್ದರು.

-------------------