ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಬರುತ್ತಾರೆ ಆದರೆ ವೈದ್ಯರು ಚಿಕಿತ್ಸೆಗೆಂದು ಬರುವವರಿಂದ ಹಣ ಪಡೆಯುವುದು ಕ್ಷಮಿಸಲಾರದ ಸಂಗತಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಎಚ್ಚರಿಸಿದರು.ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು ೯ ಕೋಟಿ ರು.ಗಳ ವೆಚ್ಚದ ಕಾಮಗಾರಿ ನಡೆಯುತ್ತಿರುವುದನ್ನು ವೀಕ್ಷಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆ ಆಸ್ಪತ್ರೆಯನ್ನು ಇನ್ನೂ ಎರಡು ಅಂತಸ್ತು ನಿರ್ಮಾಣ ಮಾಡಲು ಅಂದಾಜಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ವೈದ್ಯನ ವಿರುದ್ಧ ಕ್ರಮಕ್ಕೆ ಸೂಚನೆಇತ್ತೀಚೆಗೆ ಇಲ್ಲಿನ ಆಸ್ಪತ್ರೆಯ ವೈದ್ಯರೊಬ್ಬರು ಲಂಚ ಪಡೆಯುವ ವಿಚಾರ ನನ್ನ ಗಮನಕ್ಕೆ ಬಂದಿದ್ದು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಡಿಹೆಚ್‌ಒರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ವೈದ್ಯರಿಗೆ ಹಣ ನೀಡುವಂತಿಲ್ಲ, ಒಂದು ವೇಳೆ ವೈದ್ಯರು ಹಣಕ್ಕೆ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಆಸ್ಪತ್ರೆ ಸಾಮರ್ಥ್ಯವನ್ನು ೬೦ ಹಾಸಿಗೆಯಿಂದ ೧೦೦ ಹಾಸಿಗೆಗೆ ಹೆಚ್ಚಿಸಲಾಗಿದೆ. ಶೀಘ್ರದಲ್ಲಿ ನಗರದ ಟಿಪ್ಪುನಗರ ಸೇರಿದಂತೆ ಬೇರೆ ಭಾಗಗಳಲ್ಲಿ ಜನರ ಅನುಕೂಲಕ್ಕಾಗಿ ನಮ್ಮ ಕ್ಲಿನಿಕ್ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಜಗದೀಶ್, ಜಿ.ಪಂ. ಮಾಜಿ ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ, ಬುಕ್ಕನಹಳ್ಳಿ ಶಿವಣ್ಣ ಪವಿತ್ರ ಚಂದ್ರಶೇಖರ್ ಮಾಜಿ ತಾ.ಪಂ. ಉಪಾಧ್ಯಕ್ಷ ನಡೆಂಪಲ್ಲಿ ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.