ಸಾರಾಂಶ
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಉತ್ತೇಜನ ನೀಡುತ್ತಿವೆ. ಆದರೆ ಕಳೆದ 2- 3 ವರ್ಷಗಳ ಹಿಂದೆ ನಿರ್ಮಿಸಿದ 1439 ಶೌಚಾಲಯಕ್ಕೂ ಸರ್ಕಾರ ಸಹಾಯಧನ ನೀಡದೆ ಸಾರ್ವಜನಿಕರನ್ನು ಗ್ರಾಮ ಪಂಚಾಯಿತಿಗಳಿಗೆ ಎಡತಾಕುವಂತೆ ಮಾಡಿದೆ.ತಾಲೂಕಿನ 14 ಗ್ರಾಪಂ ವ್ಯಾಪ್ತಿಯ 43 ಗ್ರಾಮಗಳಲ್ಲಿ ಬಯಲು ಶೌಚಾಲಯ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯಧನ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಅಧಿಕಾರಿಗಳಿಂದ ಹಾಗೂ ಗ್ರಾಪಂ ಸದಸ್ಯರ ಮೂಲಕ ಜನರಿಗೆ ಒತ್ತಡ ಹೇರುತ್ತಿವೆ. ಅಲ್ಲದೇ ಸಾವಿರಾರು ಮನೆಗಳಿಗೆ ಪ್ರತಿ ಶೌಚಾಲಯಕ್ಕೆ ₹12 ಸಾವಿರಗಳಂತೆ ಸಹಾಯಧನ ನೀಡುತ್ತೇವೆ ಎಂದು ಹೇಳಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದರೂ ಸರ್ಕಾರ ನಯಾಪೈಸೆ ಸಹಾಯಧನ ಬಿಡುಗಡೆ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಶೌಚಾಲಯ ನಿರ್ಮಿಸಿದ ಫಲಾನುಭವಿಗಳಿಗೆ ಸಹಾಯಧನ ನೀಡುತ್ತದೆ. ಎರಡು ಸರ್ಕಾರಗಳು ಸೇರಿ ಎಸ್‌ಸಿ ಮತ್ತು ಎಸ್‌ಟಿಯ ಪ್ರತಿಯೊಬ್ಬ ಫಲಾನುಭವಿಗೆ ₹20 ಸಾವಿರ ನೀಡುತ್ತವೆ. ಸಾಮಾನ್ಯ ಹಾಗೂ ಇತರ ಪ್ರತಿಯೊಬ್ಬ ಫಲಾನುಭವಿಗೆ ₹12 ಸಾವಿರ ಹಣ ನೀಡುತ್ತವೆ. ಇದರಲ್ಲಿ ಕೇಂದ್ರ ಸರ್ಕಾರದ ₹7200 ಹಣ ನೀಡಿದರೆ ರಾಜ್ಯ ಸರ್ಕಾರದ ₹4800 ಸಹಾಯಧನ ನೀಡುತ್ತವೆ.ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ- 48, ಅಡರಕಟ್ಟಿ- 52, ಬಾಲೆಹೊಸೂರ- 198, ಬಟ್ಟೂರ- 105, ದೊಡ್ಡೂರ- 89, ಗೊಜನೂರ- 52, ಪು. ಬಡ್ನಿ- 32, ರಾಮಗೇರಿ- 49, ಶಿಗ್ಲಿ- 208, ಸೂರಣಗಿ- 268, ಯಳವತ್ತಿ- 135, ಗೋವನಾಳ- 35, ಹುಲ್ಲೂರ- 98, ಮಾಡಳ್ಳಿ- 70 ಹೀಗೆ ತಾಲೂಕಿನಾದ್ಯಂತ ಒಟ್ಟು 1439 ಶೌಚಾಲಯಗಳು ನಿರ್ಮಾಣವಾಗಿದ್ದರೂ ಸರ್ಕಾರದ ಸಹಾಯಧನ ಬಿಡುಗಡೆಯಾಗಿಲ್ಲ.
ಸ್ವಚ್ಛ ಭಾರತ ಮಿಷನ್ ಅಡಿ ಬಡ ಕುಟುಂಬಗಳು ಸಾಲಸೋಲ ಮಾಡಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಸರ್ಕಾರಗಳು ಸಹಾಯಧನದ ಹಣ ಬಿಡುಗಡೆ ಮಾಡದೆ ಬಡ ಜನತೆಯ ಸಹನೆ ಪರೀಕ್ಷೆ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ನೋವಿನ ಸಂಗತಿಯಾಗಿದೆ. ಸಾಕಾಗಿದೆ: ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಿದಲ್ಲಿ ₹12 ಸಾವಿರ ಸಹಾಯಧನ ನೀಡುವುದಾಗಿ ಪಿಡಿಒಗಳು ಹಾಗೂ ಗ್ರಾಪಂ ಆಡಳಿತ ಮಂಡಳಿಯ ಸದಸ್ಯರು ಹೇಳಿದ್ದರು. ಅದರಂತೆ ಶೌಚಾಲಯ ನಿರ್ಮಿಸಿ ವರ್ಷ ಕಳೆದರೂ ಸಹಾಯಧನ ಮಾತ್ರ ಬಂದಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಹಣ ಮಾತ್ರ ಬಂದಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿಲ್ಲವೆಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಾರೆ ಎಂದು ಗೋವನಾಳ ಗ್ರಾಮಸ್ಥ ರಮೇಶ ಭೂವನಗೌಡರ ಹೇಳುತ್ತಾರೆ.ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಿರ್ಮಿಸಿದ ಹಲವು ಶೌಚಾಲಯಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರಕ್ಕೆ ಎಲ್ಲ ರೀತಿಯ ಮಾಹಿತಿ ನೀಡಿದ್ದೇವೆ. ಅನುದಾನ ಬಂದ ತಕ್ಷಣ ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಲಕ್ಷ್ಮೇಶ್ವರ ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.