ಸರ್ಕಾರದ ಸೇವೆ, ಸೌಲಭ್ಯ ಅರ್ಹರಿಗೆ ತಲುಪಿಸುವುದು ಪುಣ್ಯದ ಕೆಲಸ, ಅದನ್ನು ಸರ್ಕಾರಿ ನೌಕರರು ಸೇವಾ ಮನೋಭಾವನೆಯಿಂದ ಸಾರ್ವಜನಿಕರಿಗೆ ತಲುಪಿಸುತ್ತಾರೆ
ಕೊಪ್ಪಳ: ದೇಶಕ್ಕೆ ರೈತರೇ ಬೆನ್ನೆಲುಬು ಎನ್ನುವಂತೆ, ಆಡಳಿತಕ್ಕೆ ಸರ್ಕಾರಿ ನೌಕರರೇ ಬೆನ್ನೆಲುಬು. ಸರ್ಕಾರದ ಸೇವೆ ನೇರವಾಗಿ ಸಾರ್ವಜನಿಕರಿಗೆ ತಲುಪಿಸುವ ಮಹತ್ವದ ಕಾರ್ಯ ಸರ್ಕಾರಿ ನೌಕರರು ಮಾಡುತ್ತಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಕೊಪ್ಪಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರದ ಸೇವೆ, ಸೌಲಭ್ಯ ಅರ್ಹರಿಗೆ ತಲುಪಿಸುವುದು ಪುಣ್ಯದ ಕೆಲಸ, ಅದನ್ನು ಸರ್ಕಾರಿ ನೌಕರರು ಸೇವಾ ಮನೋಭಾವನೆಯಿಂದ ಸಾರ್ವಜನಿಕರಿಗೆ ತಲುಪಿಸುತ್ತಾರೆ. ಪ್ರಸ್ತುತ ವಿಷಯ ಹೇಳಬೇಕೆಂದರೆ ಸರ್ಕಾರದ ಮಹಾತ್ವಾಕಾಂಕ್ಷಿಯ ಪಂಚ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ 3.20 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಒದಗಿಸಿದ್ದಾರೆ. ಸರ್ಕಾರಿ ನೌಕರರು ಸರ್ಕಾರದ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಮಾತನಾಡಿ, ಸರ್ಕಾರಿ ನೌಕರರು ಕಾರ್ಯಾಂಗದ ಬಹು ಮುಖ್ಯ ಅಂಗ. ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಕೊಂಡಿಯಾಗಿ ನಾವೆಲ್ಲರೂ ಕಾರ್ಯ ನಿರ್ವಹಿಸುತ್ತೇವೆ. ನಾವು ಮಾಡುವ ಕೆಲಸ ಸರ್ಕಾರದ ಹೆಸರಾಗಿ ಮಾರ್ಪಡುತ್ತದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಸರ್ಕಾರಿ ನೌಕರರಿಗೆ ಒಂದು ದಿನವನ್ನಾಗಿ ಮಾಡಿ, ಅವರು ಮಾಡಿದ ಸೇವೆಗೆ ಗೌರವ ಸಲ್ಲಿಸುವುದು ವಿಶೇಷ ಸಂಗತಿ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಆರ್.ಜುಮ್ಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ನೌಕರರ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ನಮ್ಮ ಜಿಲ್ಲೆಯಲ್ಲಿ ಬದ್ಧತೆಯುಳ್ಳ ನೌಕರರಿದ್ದು, ಸರ್ಕಾರದ ಎಲ್ಲ ಕಾರ್ಯಕ್ರಮ, ಯೋಜನೆ ಜಾರಿಗೆ ತರುವಲ್ಲಿ ಬಹುತೇಕ ಮೊದಲ 5ರಲ್ಲಿ ಒಂದು ಸ್ಥಾನದಲ್ಲಿ ನಮ್ಮ ಜಿಲ್ಲೆಯ ಹೆಸರು ಇರುತ್ತದೆ. ಇದು ನಮ್ಮ ಜಿಲ್ಲೆಯ ನೌಕರರ ಕಾರ್ಯಕ್ಷಮತೆ ಸೂಚಿಸುತ್ತದೆ. ಅದರಂತೆ ಸರ್ಕಾರದಿಂದ ನೌಕರರಿಗೆ ದೊರೆಯಬೇಕಾದ ಎಲ್ಲ ಸೌಕರ್ಯ ಒದಗಿಸುವಲ್ಲಿ ಸರ್ಕಾರಿ ನೌಕರರ ಸಂಘ ಯಾವಾಗಲೂ ಮುಂದಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ.,ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಜಂಟಿ ತೋಟಗಾರಿಕೆ ನಿರ್ದೇಶಕ ಕೃಷ್ಣ ಉಕ್ಕುಂದ,ಅಬಕಾರಿ ಉಪ ಅಧೀಕ್ಷಕ ಆಂಜಿನೇಯ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಮೆಹಮೂದ್ ಆಸೀಫ್‌ಅಲಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿ, ಜಿಲ್ಲಾ ಹಿರಿಯ ಉಪಾಧ್ಯಕ್ಷರು, ತಾಲೂಕು/ಯೋಜನಾ ಘಟಕದ ಅಧ್ಯಕ್ಷರು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.