ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ: ನ್ಯಾ.ಕೆ.ಎನ್.ಫಣೀಂದ್ರ

| Published : Sep 26 2025, 01:00 AM IST

ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ: ನ್ಯಾ.ಕೆ.ಎನ್.ಫಣೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಾಜ್ಯ ಸರ್ಕಾರಿ ನೌಕರರ ಭುಜದ ಮೇಲೆ ಸುಮಾರು 8 ಕೋಟಿ ಜನಸಾಮಾನ್ಯರ ಸಮಸ್ಯೆಗಳ ಜವಾಬ್ದಾರಿ ಇದ್ದು, ಕರ್ತವ್ಯ ಪ್ರಜ್ಞೆಯಿಂದ, ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ .ಫಣೀಂದ್ರ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

- ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ಮಾರ್ಮಿಕ ಸಲಹೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಸರ್ಕಾರಿ ನೌಕರರ ಭುಜದ ಮೇಲೆ ಸುಮಾರು 8 ಕೋಟಿ ಜನಸಾಮಾನ್ಯರ ಸಮಸ್ಯೆಗಳ ಜವಾಬ್ದಾರಿ ಇದ್ದು, ಕರ್ತವ್ಯ ಪ್ರಜ್ಞೆಯಿಂದ, ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ .ಫಣೀಂದ್ರ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ , ಕೃಷಿ ಮತ್ತು ತೋಟಗಾರಿಕೆ ಇಲಾಖೆ, ನ್ಯಾಯಾಂಗ ನೌಕರರು, ಜಿಲ್ಲಾ ಮತ್ತು ತಾಲೂಕು ಹಾಗೂ ಇತರ ಇಲಾಖೆ ಅಧಿಕಾರಿಗಳಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾಯುಕ್ತ ಕಾಯ್ದೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸದಿದ್ದರೆ ಅಂಥ ಜೀವನ ಜೀವನವಲ್ಲ. ನಾವು ಸತ್ತ ಮೇಲೂ ಜನರು ನೆನಸಿಕೊಳ್ಳುವ ಕೆಲಸ ಮಾಡಬೇಕು. ಬದುಕಿದರೂ ಸತ್ತಂತಿರಬಾರದು. ಸತ್ತರೂ ಬದುಕಿದಂತಿರ ಬೇಕು. ಸರ್ಕಾರ ಈ ಕೆಲಸ ಸಮಾಜ ಸೇವೆ ಮಾಡುವುದಕ್ಕಾಗಿ ಭಗವಂತ ನಮಗೆ ನೀಡಿದ ಅವಕಾಶ ಎಂದು ಭಾವಿಸಿ ದೇವರಿಗೂ, ಸಮಾಜಕ್ಕೂ ಕೃತಜ್ಞರಾಗಿರಬೇಕು. ಸಮಾಜದಿಂದ ಕೇಳಿ ಬರುವ ಆರೋಪ ತೊಡೆದು ಹಾಕಲು ದಕ್ಷತೆ, ಪ್ರಾಮಾಣಿಕತೆ ಯಿಂದ ಕಾರ್ಯ ನಿರ್ವಹಿಸಬೇಕು. ಇದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿ ಹೇಳಿದರು. ಕೆಲವೊಮ್ಮೆ ಸರ್ಕಾರಿ ನೌಕರ ಅಥವಾ ನಾಗರಿಕನಾಗಿ ಯಾವುದೇ ಕರ್ತವ್ಯಲೋಪ ಎಸಗದಿದ್ದರೂ ದೂರು ನೀಡುವಂತಹ ಸನ್ನಿವೇಶವಿರುತ್ತದೆ. ದೂರು ಕೊಟ್ಟವರ ಉದ್ದೇಶ ಕಾನೂನಾತ್ಮಕವಾಗಿದ್ದರೂ ಕಾನೂನು ಬಾಹಿರವಾಗಿದ್ದರೂ ಹೆದರಿ ಕಾರ್ಯ ನಿರ್ವಹಿಸುತ್ತಾರೆ ಎಂಬ ದುರುದ್ದೇಶದಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ದೂರು ನೀಡುವ ಸಾಧ್ಯತೆ ಇದೆ. ಹೀಗಾಗಿ ಕೆಲವೊಮ್ಮೆ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದು ಕೂಡ ತಪ್ಪು ಎಂಬ ಭಾವನೆ ಬಂದುಬಿಟ್ಟಿದೆ. ಲೋಕಾಯುಕ್ತ ಕಾಯ್ದೆಯಲ್ಲಿ ದೂರುದಾರರಿಗೆ ಸವಲತ್ತುಗಳಿರುವಂತೆ ಅಧಿಕಾರಿಗಳಿಗೂ ರಕ್ಷಣೆಗಳಿರುವ ಬಗ್ಗೆ ಮನದಟ್ಟು ಮಾಡಿಕೊಡುವುದು ಅಗತ್ಯ. ಕೆಸಿಎಸ್ ಆರ್ ನಿಯಮಾವಳಿಗಳಲ್ಲದೆ, ಲೋಕಾಯುಕ್ತದ ಕಾನೂನಿನ ಅಧ್ಯಯನ ಅಧಿಕಾರಿಗಳು ಮಾಡಬೇಕಿದೆ. ಸರ್ಕಾರದಿಂದ ನೇರ ನೇಮಕಾತಿಯಾಗಿ ವೇತನ ಪಡೆದುಕೊಳ್ಳುವವರು ಸರ್ಕಾರಿ ನೌಕರರು. ಅವರಲ್ಲದೆ ಸಾರಿಗೆ ನಿಗಮದಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸಾರ್ವಜನಿಕ ನೌಕರರು. ಈ ಪರಿಧಿಯೊಳಗೆ ಇರುವವರಿಂದ ತಪ್ಪಾದಾಗ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ ಎಂದರು. ಇವುಗಳ ಜೊತೆಗೆ ಪಂಚಾಯಿತಿಯಿಂದ ಆರಂಭವಾಗಿ ಮುಖ್ಯಮಂತ್ರಿವರೆಗೆ ಚುನಾಯಿತ ಪ್ರತಿನಿಧಿಗಳು, ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಅಂದರೆ ₹1.20ಲಕ್ಷ ಮೂಲ ವೇತನ ಪಡೆಯುವವರು ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಅದಕ್ಕಿಂತ ಕೆಳಗಿನ ವೇತನ ಪಡೆಯುವವರು ಮಾತ್ರ ಉಪಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಸರ್ಕಾರದಿಂದ ದುರ್ನಡತೆ, ದುರಾಡಳಿತದ ಸಂದರ್ಭದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕು. ಅದು ರಾಜ್ಯ-ಕೇಂದ್ರ ಸರ್ಕಾರದಡಿ ಕಾರ್ಯ ನಿರ್ವಹಿಸಬಾರದು. ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಈ ತೀರ್ಮಾನ ವಾಯಿತು. ಆಗ ಈ ಲೋಕಾಯುಕ್ತ ಹಾಗೂ ಲೋಕಪಾಲ್ ಕಾಯ್ದೆ ಜಾರಿಗೆ ಬಂದಿತು ಎಂದು ತಿಳಿಸಿದರು. ಇದಕ್ಕೆ ಕಾನೂನಿನ ಪರಿಣತಿ, ಸಮಾಜದ ಬಗ್ಗೆ ಕಳಕಳಿ, ಈಗಾಗಲೇ ಸಮಾಜದ ಲೋಪದೋಷ ತಿದ್ದುವ ಕೆಲಸ ಮಾಡಿ ದವರು, ನ್ಯಾಯಯುತ ಪ್ರಕ್ರಿಯೆ ಅನುಸರಿಸಿದವರು, ಸಾಮಾನ್ಯ ನ್ಯಾಯ ಎತ್ತಿ ಹಿಡಿದವರು ಎನ್ನುವ ಪ್ರಸ್ತಾವ ಬಂದಾಗ ಉಚ್ಚ ನ್ಯಾಯಾಲಯದಲ್ಲಿ ಕನಿಷ್ಠ 10 ವರ್ಷ ಕಾರ್ಯ ನಿರ್ವಹಿಸಿದ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರಾಗಿ, ಕನಿಷ್ಠ 5 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತ ನ್ಯಾಯಮೂರ್ತಿಗಳನ್ನು ಉಪ ಲೋಕಾಯುಕ್ತರಅಗಿ ನೇಮಕ ಮಾಡಲು ತೀರ್ಮಾನವಾಯಿತು ಎಂದರು. ಸಹಜ, ಅಸಹಜ ಮತ್ತು ದುರುದ್ದೇಶಪೂರಿತ ತಪ್ಪುಗಳಾದ ಸಂದರ್ಭ ಉಭಯ ಪಕ್ಷಗಾರರಿಗೆ ಸಮಾನ ಅವಕಾಶ ನೀಡಿ ಕೂಲಂಕಷವಾಗಿ ವಿಚಾರಣೆ ಮಾಡಿ ನಿರ್ದಿಷ್ಟ ತೀರ್ಪು ನೀಡಲು ಲೋಕಾಯುಕ್ತಕ್ಕೆ ನ್ಯಾಯಾಧೀಶರ ಒಂದು ಪಡೆಯನ್ನೇ ನೇಮಕ ಮಾಡಲಾಯಿತು. ಲೋಕಾಯುಕ್ತಕ್ಕೆ ಒಂದು ಬಲವಾಗಿರುವುದೆಂದರೆ ಜಿಲ್ಲಾ ನ್ಯಾಯಾಧೀಶರ ಕಾನೂನು ಪಡೆ. ಇನ್ನೊಂದು ಬಲವಾದ ವ್ಯವಸ್ಥೆ ಎಂದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವ ಕಾರ್ಯವನ್ನು ಲೋಕಾಯುಕ್ತ ಪೊಲೀಸ್ ಇಲಾಖೆಗೆ ನೀಡಲಾಗಿದೆ. ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಂತ್ರಿಕ ವರ್ಗವಿದೆ. ಆಡಳಿತಾತ್ಮಕ ವಿಭಾಗ ಸೇರಿದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇಲಾಖೆ ಯಂತೆಯೇ ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲೂ ಕೂಡ ಎಲ್ಲಾ ಹಂತದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 1600 ರಷ್ಟು ಮಂದಿ ಇದ್ದಾರೆ. ಒಬ್ಬರು ಲೋಕಾಯುಕ್ತರು ಹಾಗೂ ಇಬ್ಬರು ಉಪ ಲೋಕಾಯುಕ್ತರು ಸೇರಿ ಸುಮಾರು 40 ಮಂದಿ ನ್ಯಾಯಾಧೀಶರಿದ್ದಾರೆ ಎಂದು ಇಲಾಖೆ ಸ್ವರೂಪ ತಿಳಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಮ್ಮ ಸಮಾಜ ವ್ಯವಸ್ಥೆಯ ಪ್ರತಿಯೊಂದು ಭಾಗಗಳನ್ನು ಅವಲಂಬಿಸಿ ಬಳಸಿಕೊಳ್ಳುತ್ತಿದ್ದೇವೆ. ಹೀಗಿರುವಾಗ ನಾವು ಸಮಾಜಕ್ಕೆ ಕೊಡುಗೆ ನೀಡುವುದು ಅಗತ್ಯ ಎಂದರು. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಉಪ ಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಆಪ್ತ ಕಾರ್ಯ ದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪಿ.ವಿ. ಸ್ನೇಹಾ ಉಪಸ್ಥಿತರಿದ್ದರು.

25 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಲೋಕಾಯುಕ್ತ ಕಾಯ್ದೆ ಕಾನೂನು ಅರಿವು ಕಾರ್ಯಕ್ರಮವನ್ನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಉದ್ಘಾಟಿಸಿದರು.