ಆರೋಗ್ಯವಂತ ಶಿಶುವಿನಿಂದ ಉತ್ತಮ ಸಮಾಜ ನಿರ್ಮಾಣ

| Published : Sep 18 2025, 01:10 AM IST

ಸಾರಾಂಶ

ತಾಯಿಯ ಎದೆಹಾಲು ಉತ್ತಮ ಪೌಷ್ಟಿಕ ಆಹಾರವಾಗಿದ್ದು ಅದು ಅಮೃತಕ್ಕೆ ಸಮಾನ ಹಾಗಾಗಿ ಮಗುವಿನ ಬೆಳೆವಣಿಗೆಗೆ ತಾಯಿಯ ಆರೋಗ್ಯವು ಮುಖ್ಯ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಆರೋಗ್ಯವಂತ ಶಿಶುವಿನಿಂದ ಆರೋಗ್ಯಯುತವಾದ ಸಮಾಜವನ್ನು ಕಟ್ಟಬಹುದಾಗಿದ್ದು, ಇದನ್ನು ಅರಿತು ಪೋಷಕರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಸಿ. ಅರವಿಂದ್ರ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪೌಷ್ಟಿಕ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಯಿಯ ಎದೆಹಾಲು ಉತ್ತಮ ಪೌಷ್ಟಿಕ ಆಹಾರವಾಗಿದ್ದು ಅದು ಅಮೃತಕ್ಕೆ ಸಮಾನ ಹಾಗಾಗಿ ಮಗುವಿನ ಬೆಳೆವಣಿಗೆಗೆ ತಾಯಿಯ ಆರೋಗ್ಯವು ಮುಖ್ಯವಾಗಿದ್ದು ತಾಯಿ ಆರೋಗ್ಯವಾಗಿದ್ದರೆ ಇಡಿ ಕುಟುಂಬ ಆರೋಗ್ಯವಾಗಿರಲಿದ್ದು, ತಾಯಿಯ ಗರ್ಭದಲ್ಲಿರುವಾಗಿನಿಂದ ಮಗು ಜನಿಸುವವರೆಗೂ ಅಂಗನವಾಡಿ ಕಾರ್ಯಕರ್ತೆಯರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್. ಚಂದನ್ ಮಾತನಾಡಿ, ಶುದ್ದ ಆಹಾರವನ್ನು ಬಿಟ್ಟು ಸಿದ್ದ ಆಹಾರಕ್ಕೆ ದಾಸರಾಗದೆ ಉತ್ತಮ ಪೌಷ್ಟಿಕ ಆಹಾರ ಸೇವಿಸಿ ಅರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ ಮುಂದಿನ ಪೀಳಿಗೆಗೆ ಸಾಂಪ್ರದಾಯಿಕ ಆಹಾರ ಪದ್ಧತಿ ಪರಿಚಯಿಸುವ ಕೆಲಸವಾಗಬೇಕು ಎಂದು ನುಡಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅಸ್ರೀನಾ ಮಾತನಾಡಿ, ತಾಯಂದಿರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಎಲ್ಲರಿಗೂ ತಲುಪಬೇಕಿದ್ದು ಇದರ ಜತೆಗೆ ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳು, ಮೊಳಕೆಕಾಳು, ಹಣ್ಣು-ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.ವಕೀಲೆ ಕೆ.ಪಿ. ಪ್ರಭಾವತಿ ಭ್ರೂಣಹತ್ಯೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಿಕೊಡಲಾಯಿತು.ಶಿಶು ಅಭಿವೃದ್ಧಿ ಅಧಿಕಾರಿ ಸಿ.ಎಂ. ಅಣ್ಣಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ, ಮೇಲ್ವಿಚಾರಕರಾದ ಶೋಭ, ಗಾಯಿತ್ರಿ, ರತ್ನಮ್ಮ, ಮಂಜುಳ, ಮೋಹನಕುಮಾರಿ, ಜಯಮಾಲ, ಪೋಷಣ್ ಅಭಿಯಾನ ಯೋಜನೆಯ ಸಂಯೋಜಕ ಹರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ ಇದ್ದರು.