7ನೇ ವೇತನ ಆಯೋಗ ಜಾರಿಗೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ನೌಕರರು ಒತ್ತಾಯ

| Published : Jul 13 2024, 01:39 AM IST

7ನೇ ವೇತನ ಆಯೋಗ ಜಾರಿಗೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ನೌಕರರು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ಸಂಘ ಮತ್ತು ಶಿಕ್ಷಣ ಇಲಾಖೆ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ನೌಕರರು ಶಾಸಕ‌ ಧೀರಜ್ ಮುನಿರಾಜು ಹಾಗೂ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

-ಒಪಿಎಸ್‌, ನಗದುರಹಿತ ವೈದ್ಯಕೀಯ ಸೇವೆಗೆ ಆಗ್ರಹಿಸಿ ಸರ್ಕಾರಿ ನೌಕರರ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಜಾರಿ, ಹಳೇ ಪಿಂಚಣಿ ಯೋಜನೆ ಮತ್ತು ನಗದು ರಹಿತ ವೈದ್ಯಕೀಯ ಸೇವೆ ಜಾರಿಗೆ ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ಸಂಘ ಮತ್ತು ಶಿಕ್ಷಣ ಇಲಾಖೆ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ನೌಕರರು ಶಾಸಕ‌ ಧೀರಜ್ ಮುನಿರಾಜು ಹಾಗೂ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು 2022 ಜುಲೈ ತಿಂಗಳಿಂದ ಪರಿಷ್ಕರಿಸಬೇಕಾಗಿದೆ. ಹಿಂದಿನ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿ ಮತ್ತು ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.‌ ಪ್ರಸ್ತುತ 7ನೇ ವೇತನ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹಿಂದಿನ‌ ವೇತನ ಆಯೋಗಗಳ ವರದಿಗಳು ನೀಡಿದ ಸಮಯಕ್ಕೆ ಪ್ರಸ್ತುತ ವೇತನ ಆಯೋಗ ನೀಡಿದ ವರದಿಯ ಸಮಯ ಸಾಕಷ್ಟು ವಿಳಂಬವಾಗಿದೆ ಎಂದರು.

2017ರಲ್ಲಿ ರಚಿಸಿದ್ದ ವೇತನ ಆಯೋಗದ ವರದಿಯನ್ನು ಸಲ್ಲಿಸಿದ 6 ತಿಂಗಳಲ್ಲೇ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಆರು ತಿಂಗಳೊಳಗೆ ವರದಿ ‍ಪಡೆಯದ ರಾಜ್ಯ ಸರ್ಕಾರ ಆಯೋಗವನ್ನು ಎರಡು ಸಲ ಆರು ತಿಂಗಳ ಅವಧಿಗೆ ವಿಸ್ತರಿಸಿತು. ವೇತನ ಆಯೋಗ ರಚನೆಯಾಗಿ 19 ತಿಂಗಳು ಕಳೆದಿದೆ. ಕರ್ನಾಟಕ ರಾಜ್ಯ ನೌಕರರ ಸ‌ಮ್ಮೇಳನದದಲ್ಲಿ ಮುಖ್ಯಮಂತ್ರಿ ನೀಡಿದ್ದ ವರದಿ ಅನುಷ್ಠಾನದ ಭರವಸೆ ಇನ್ನೂ ಈಡೇರಿಲ್ಲ. ರಾಜ್ಯ ಸರ್ಕಾರ ಕೂಡಲೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

7ನೇ ವೇತನ ಆಯೋಗದ ವರದಿ ಜಾರಿ ಜೊತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ಕಾರ್ಯದರ್ಶಿ ಶ್ರೀನಿವಾಸ, ತಾಲೂಕು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಶಿಕ್ಷಕರ ಮತ್ತು ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.