ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಮಾತನಾಡಿ, ಕನ್ನಡ ನಾಡು, ನುಡಿ ಉಳಿಸುವ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದರು.
ಯಲ್ಲಾಪುರ: ಸರ್ಕಾರಿ ಸೇವೆ ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಸೀಮಿತವಾಗಬಾರದು. ಅದು ಕಲೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರ ಬೆಳಗುವ ಕೆಲಸ ಮಾಡಬೇಕು. ಪ್ರಜಾಸೇವೆಯಲ್ಲಿದ್ದಾಗ ನೌಕರರು ಉತ್ತಮ ನಡವಳಿಕೆ, ಜನಸ್ನೇಹಿ ಕಾರ್ಯಗಳ ಮೂಲಕ ಅನುಕರಣೀಯವಾಗಿರಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಭಾನುವಾರ ಪಟ್ಟಣದ ಅಡಿಕೆ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪದಗ್ರಹಣ, ಸಾಂಸ್ಕೃತಿಕ ವೈಭವ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.ಇದೇ ವೇಳೆ ಸಾಹಿತಿ ಸಂತೋಷ ಕುಸನೂರ ಅವರ ತ್ರಿವೇಣಿಯಂತರಂಗ ಪುಸ್ತಕ ಬಿಡುಗಡೆಗೊಳಿಸಲಾಯಿತು. ನಮ್ಮೂರು ಸೇವಾ ಟ್ರಸ್ಟ್ ಶಿರಸಿ, ಮೌಳಂಗಿ ವಿಎಫ್‌ಸಿ, ನಿನಾದ ಸಂಘಟನೆ ಭಟ್ಕಳ, ಹೆಮ್ಮಾಡಿ ವಿಎಫ್‌ಸಿ, ಜಿಲ್ಲಾ ಗ್ರಾಮ ಯುವ ಒಕ್ಕಲು ಬಳಗ ಕುಮಟಾ, ಅರಬೈಲ್, ದೇಹಳ್ಳಿ, ಕಸ್ತೂರಬಾನಗರ ಶಾಲಾಭಿವೃದ್ಧಿ ಸಮಿತಿಗಳು, ಪಹರೆ ವೇದಿಕೆ ಕಾರವಾರ ಸಂಘಟನೆಗಳಿಗೆ ಜಿಲ್ಲಾ ಮಟ್ಟದ ಉತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಜ್ಞಾನಪ್ರಕಾಶ ಕಾರಂತ, ಬಿ.ಜಿ. ತುರಮುರಿ, ಗುರು ನಾಯಕ, ಪ್ರಭಾವತಿ ಗೋವಿ, ಜಿ. ಸುಮಾ, ನಾಗರಾಜ ಕಲಾಲ, ತುಳಸಿ ಗೌಡ, ವಿ.ಜಿ. ಭಟ್ಟ, ಹನುಮಂತ ಚೋಟನ್ನವರ್, ಮುತ್ತುರಾಜ ಹಳ್ಳಿ, ವೆಂಕಟೇಶ ಗೌಡ, ಉಷಾ ನಾಯ್ಕ, ದೇವಿ ಗೌಡ ಅವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಮಾತನಾಡಿ, ಕನ್ನಡ ನಾಡು, ನುಡಿ ಉಳಿಸುವ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ ಶಿವಲೀಲಾಕ್ಕ ಮಾತನಾಡಿ, ಪ್ರತಿಯೊಬ್ಬನಲ್ಲಿಯೂ ಒಂದಲ್ಲ ಒಂದು ವಿಶೇಷತೆ ಇರುತ್ತದೆ. ಅದು ವ್ಯಕ್ತಗೊಳ್ಳಲು ಇಂತಹ ಸಂಘಟನೆಗಳು ಮುಂಚೂಣಿಯಲ್ಲಿರಬೇಕು ಎಂದರು.ಜಿಲ್ಲಾಧ್ಯಕ್ಷ ಸಂತೋಷಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷೆ ರಮಾ ಆರ್., ಸಂಸ್ಥಾಪಕ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ್, ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು, ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆರಗುಡ, ರಾಜ್ಯ ಪೋಷಕ ಬಸವರಾಜ ಬಾಗಲ್, ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷರಾದ ಶಿವಲೀಲಾ ಹುಣಸಗಿ, ಆನಂದ ಕೊರವರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಗಾಂವ್ಕರ ಬಿದ್ರೆಮನೆ, ಆರ್‌ಎಫ್ಒ ಎಂ.ಎಚ್. ನಾಯ್ಕ ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಐನಾಪುರ ಸ್ವಾಗತಿಸಿದರು. ಗೌರವಾಧ್ಯಕ್ಷ ವಿಠ್ಠಲ ಕೊರವೇಕರ್ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ಪಟಗಾರ ಹಾಗೂ ವೀಣಾ ಹೆಗಡೆ ನಿರೂಪಿಸಿದರು.