ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು: ಬಿಇಒ ಕೆ.ಯೋಗೇಶ್

| Published : Apr 22 2025, 01:54 AM IST

ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು: ಬಿಇಒ ಕೆ.ಯೋಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ಕೂಡ ಸರ್ಕಾರದಿಂದ ವಂತಿಕೆ ಪಡೆದು ಸೇವೆ ನೀಡುತ್ತಿದ್ದೇವೆ. ಹಾಗಾಗಿ ಯಾವುದೇ ಒತ್ತಡ ಬರಲಿ ಸರ್ಕಾರಿ ನೌಕರರು ಸಣ್ಣ ವಿಚಾರಗಳಿಗೆ ಮನಸ್ಥಿತಿ ಬದಲಾಯಿಸಿಕೊಂಡು ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಸಂದಿಗ್ದತೆಯನ್ನು ಎದುರಿಸುವ ಧೈರ್ಯ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಾರ್ಯಾಂಗ ಇಡೀ ವ್ಯವಸ್ಥೆಯ ಜೀವಾಳವಿದ್ದಂತೆ. ಸರ್ಕಾರಿ ನೌಕರರು ಎಂತಹ ಒತ್ತಡ ಎದುರಾದರೂ ಕೂಡ ಮನಸ್ಥಿತಿ ಬದಲಾಯಿಸಿಕೊಳ್ಳದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಕೆಳಹಂತದ ಸರ್ಕಾರಿ ನೌಕರರು ಬಹಳಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ಅಂತಹ ಸಂದರ್ಭದಲ್ಲಿ ಅವರು ಬರವಣಿಗೆ ರೂಪದಲ್ಲಿ ಬರೆದಿಟ್ಟು ತಮ್ಮ ನೋವನ್ನು ವ್ಯಕ್ತಪಡಿಸುತ್ತಿರುವ ಅನೇಕ ಉದಾಹರಣೆಗಳಿವೆ ಎಂದರು.

ಯಾವುದೇ ಇಲಾಖೆಯ ಒಬ್ಬ ಅಧಿಕಾರಿ ಸೇವೆಯಿಂದ ವಜಾಗೊಂಡರೆ ಯಾರೂ ಕೂಡ ಪ್ರಶ್ನೆ ಮಾಡುವುದಿಲ್ಲ. ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡುವಾಗ ನಮ್ಮ ಕೆಲಸ, ಜವಾಬ್ದಾರಿ ಮತ್ತು ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ಏನೆಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ಕೂಡ ಸರ್ಕಾರದಿಂದ ವಂತಿಕೆ ಪಡೆದು ಸೇವೆ ನೀಡುತ್ತಿದ್ದೇವೆ. ಹಾಗಾಗಿ ಯಾವುದೇ ಒತ್ತಡ ಬರಲಿ ಸರ್ಕಾರಿ ನೌಕರರು ಸಣ್ಣ ವಿಚಾರಗಳಿಗೆ ಮನಸ್ಥಿತಿ ಬದಲಾಯಿಸಿಕೊಂಡು ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಸಂದಿಗ್ದತೆಯನ್ನು ಎದುರಿಸುವ ಧೈರ್ಯ ಮಾಡಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ತಾಪಂ ಇಒ ಸತೀಶ್ ಮಾತನಾಡಿ, ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವುದೂ ಸೇರಿದಂತೆ ಪ್ರತಿನಿತ್ಯ ಹಲವು ರೀತಿಯಲ್ಲಿ ಒತ್ತಡವನ್ನು ಕಾಣುತ್ತಿದ್ದೇವೆ. ಇಂತಹ ಒತ್ತಡ ನಿಭಾಯಿಸುವಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವ ವ್ಯವಸ್ಥೆಯಾಗಬೇಕಿದೆ ಎಂದರು.

ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ ತನ್ನದೇ ಆದ ಕಾರ್ಯ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರನ್ನು ಗೌರವಿಸುವಂತಹ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಅತ್ಯಂತ ಕ್ರಿಯಾಶೀಲವಾಗಿ ಹೆಜ್ಜೆಹಾಕುತ್ತಿರುವುದು ಶ್ಲಾಘನೀಯ ಎಂದರು.

ಸರ್ಕಾರಿ ನೌಕರರ ದಿನಾಚರಣೆ ಕುರಿತು ಅರಣ್ಯಾಧಿಕಾರಿ ಕೆ.ವಿ.ಶಿವರಾಮು ಪ್ರಧಾನ ಭಾಷಣ ಮಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಇಲಾಖೆಗಳ 15 ಮಂದಿ ಡಿಗ್ರೂಪ್ ನೌಕರರನ್ನು ಸನ್ಮಾನಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಪತ್ ಪಟೇಲ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಈರಣ್ಣ ದಾನಸೂರ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಮಧುಸೂಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.