ಸರ್ಕಾರಿ ನೌಕರರು ಬದ್ಧತೆಯಿಂದ ಜನರ ಸೇವೆ ಮಾಡಬೇಕು: ತಹಸೀಲ್ದಾರ್ ಲೋಕೇಶ್

| Published : Oct 13 2025, 02:00 AM IST

ಸರ್ಕಾರಿ ನೌಕರರು ಬದ್ಧತೆಯಿಂದ ಜನರ ಸೇವೆ ಮಾಡಬೇಕು: ತಹಸೀಲ್ದಾರ್ ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಂದು ಕಚೇರಿಗಳಲ್ಲಿ ಇ ಆಫೀಸ್ ಅಳವಡಿಸಿಕೊಳ್ಳಬೇಕು. ಹಿರಿಯ ನೌಕರರು ಕಂಪ್ಯೂಟರ್‌ಗಳನ್ನು ಬಳಸಲು ಮುಂದಾಗಬೇಕು. ಪ್ರಸ್ತುತ ದಿನಮಾನಗಳ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ನೌಕರಿಯಲ್ಲಿನ ಏರಿಳಿತದಿಂದ ಕೆಲವರಲ್ಲಿ ಅಭದ್ರತೆ ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರಿ ನೌಕರರು ಆಸೆ ಆಮಿಷಗಳಿಗೆ ಒಳಗಾಗದೇ ಮೌಲ್ಯಾಧಾರಿತವಾಗಿ ಬದ್ಧತೆಯಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದು ತಹಸೀಲ್ದಾರ್ ಲೋಕೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆ, ಸೇವಾ ಪುರಸ್ಕಾರ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಟ್ಯಾಂತರ ಜನಸಂಖ್ಯೆ ನಡುವೆ ಸರ್ಕಾರಿ ಕೆಲಸ ಸಿಕ್ಕಿರುವುದು ಪುಣ್ಯ ಎಂದು ತಿಳಿದು ನಿಯಮಾನುಸಾರ ಒತ್ತಡವಿಲ್ಲದೇ ಕೆಲಸ ನಿರ್ವಹಿಸಬಹುದು ಎಂದರು.

ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಂದು ಕಚೇರಿಗಳಲ್ಲಿ ಇ ಆಫೀಸ್ ಅಳವಡಿಸಿಕೊಳ್ಳಬೇಕು. ಹಿರಿಯ ನೌಕರರು ಕಂಪ್ಯೂಟರ್‌ಗಳನ್ನು ಬಳಸಲು ಮುಂದಾಗಬೇಕು. ಪ್ರಸ್ತುತ ದಿನಮಾನಗಳ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ನೌಕರಿಯಲ್ಲಿನ ಏರಿಳಿತದಿಂದ ಕೆಲವರಲ್ಲಿ ಅಭದ್ರತೆ ಕಾಡುತ್ತಿದೆ. ಸರ್ಕಾರಿ ನೌಕರಿಯಲ್ಲಿ ಭದ್ರತೆ ಇರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ವಿವಿಧ ಇಲಾಖೆಗಳ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರು ಕುಟುಂಬ ಇದ್ದಂತೆ ಎಂದು ಶ್ಲಾಘಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಭವನ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಹಿರಿಯ ಪತ್ರಕರ್ತ ಎ.ಎಸ್.ಪ್ರಭಾಕರ್, ಮಾರೇಹಳ್ಳಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸೇವಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕರ್ತವ್ಯದಲ್ಲಿ ಒತ್ತಡ ನಿವಾರಣೆ ಉಪನ್ಯಾಸ ಹಾಗೂ ಹಾಸ್ಯ ಪ್ರಸಂಗವನ್ನು ಕಲಾವಿದ ನಗೆಮಳೆರಾಜ ಸಿ.ಚಂದ್ರಾಜ್ ನಡೆಸಿಕೊಟ್ಟು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎನ್.ಎಂ.ಪುಟ್ಟಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಬಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್, ಪ್ರಮುಖರಾದ ಎಂ.ಕೆ.ಶ್ರೀನಿವಾಸ್, ವಿ.ಎಲ್.ನಾಗರಾಜು, ಸರ್ಕಾರಿ ನೌಕರರ ಸಂಘದ ಸುಕನ್ಯ ಸೇರಿದಂತೆ ಇತರರು ಇದ್ದರು.