ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಜ.17 ಮತ್ತು 18ರಂದು ವಿವಿಧ ಸಮನಾಂತರ ವೇದಿಕೆಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ತಿಳಿಸಿದರು

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಜ.17 ಮತ್ತು 18ರಂದು ವಿವಿಧ ಸಮನಾಂತರ ವೇದಿಕೆಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಗಳಿಗೆ ಜಿಲ್ಲೆಯ 3000ಕ್ಕೂ ಹೆಚ್ಚಿನ ನೌಕರರು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಸ್ಪರ್ಧಿಗಳಿಗೆ ಜಿಲ್ಲಾಡಳಿತದಿಂದ 2 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ. ಅಲ್ಲದೇ ಸ್ಪರ್ಧೆಗಳು ನಡೆಯುವ ದಿನಗಳಂದು ಊಟೋಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪೊಲೀಸ್‌ ಹಾಗೂ ಕ್ರೀಡಾ ಮೀಸಲಾತಿಯಡಿ ಆಯ್ಕೆಯಾಗಿರುವ ನೌಕರರು, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಇಲಾಖೆಗಳ ನೌಕರರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೇ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿ ಅನುಮತಿ ಪಡೆದು ಭಾಗವಹಿಸಬಹುದಾಗಿದೆ ಎಂದ ಅವರು, ಗುಂಪು ಮತ್ತು ವೈಯಕ್ತಿಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಪ್ರಮುಖವಾಗಿ ಪುಟ್ಬಾಲ್‌, ವಾಲಿಬಾಲ್‌, ಹಾಕಿ, ಕಬ್ಬಡ್ಡಿ, ಟೇಬಲ್‌ಟೆನ್ನೀಸ್‌, ಷಟಲ್‌ಬ್ಯಾಡ್ಮಿಂಟನ್‌, ಬಾಲ್‌ಬ್ಯಾಡ್ಮಿಂಟನ್‌, ಕೇರಂ, ಕ್ರಿಕೆಟ್‌, ಬಾಸ್ಕೆಟ್‌ಬಾಲ್‌, ಚೆಸ್‌, ಥ್ರೋಬಾಲ್‌, ಖೋ-ಖೋ, ಯೋಗ, ಈಜು, ಓಟ ಇರಲಿದೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕರ್ನಾಟಕ-ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಲಘು ಸಂಗೀತ, ಜಾನಪದ ಗೀತೆ, ಪಾಶ್ಚಾತ್ಯ ಸಂಗೀತ, ಪಾಶ್ಚಾತ್ಯ ನೃತ್ಯ, ಕಿರುನಾಟಕಗಳು ಇರಲಿವೆ ಎಂದು ಮಾಹಿತಿ ನೀಡಿದರು.

ಜ.17ರಂದು ಬೆಳಿಗ್ಗೆ 10ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ ಅ‍ಧ್ಯಕ್ಷತೆ ವಹಿಸುವರು. ಶಾಸಕರಾದ ಬಿ.ಕೆ.ಸಂಗಮೇಶ್ವರ್‌, ಗೋಪಾಲಕೃಷ್ಣ ಬೇಳೂರು ವಿಶೇಷ ಆಹ್ವಾನಿತರಾಗಿ ಆಗಮಿಸಲಿರುವರು ಎಂದು ವಿವರಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಅವರು ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನ ಪರಿಷತ್‌ ಮತ್ತು ವಿಧಾನ ಸಭಾ ಸದಸ್ಯರು, ನಿಗಮ-ಮಂಡಳಿಗಳ ಅ‍ಧ್ಯಕ್ಷರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌.ವಿ, ಮಹಾನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.