ಉಡುಪಿ: ಭವಿಷ್ಯದ ಮೀನುಗಾರಿಕೆ ದೃಷ್ಟಿಯಿಂದ ನಾಡದೋಣಿ ಮೀನುಗಾರಿಕಾ ದೋಣಿಗಳಿಗೆ ಎಲ್‌ಪಿಜಿ ಆಧಾರಿತ ಔಟ್ ಬೋರ್ಡ್ ಇಂಜಿನ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ನಾಡದೋಣಿ ಮೀನುಗಾರಿಕೆ ಬಳಕೆಯ ಎಲ್.ಪಿ.ಜಿ. ಆಧಾರಿತ ಔಟ್ ಬೋರ್ಡ್ ಇಂಜಿನ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಚಿವರಿಗೆ ಮನವಿ ನೀಡುತ್ತೇನೆ: ಸೀಮೆ ಎಣ್ಣೆ ಬಳಕೆಗೆ ಪರ್ಯಾಯವಾಗಿ ಎಲ್.ಪಿ.ಜಿ. ಆಧಾರಿತ ಔಟ್ ಬೋರ್ಡ್ ಇಂಜಿನ್ ಬಳಕೆಯ ಬಗ್ಗೆ ನಾಡದೋಣಿ ಮೀನುಗಾರರಿಗೆ ಮಾಹಿತಿ ನೀಡಿ, ಈ ಮೂಲಕ ಮೀನುಗಾರಿಕೆಯ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಿದೆ, ಶೀಘ್ರದಲ್ಲೇ ಎಲ್.ಪಿ.ಜಿ. ಕಿಟ್ ಅಳವಡಿಕೆಗೆ ಪ್ರಧಾಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ ಸಬ್ಸಿಡಿ ನೀಡುವಂತೆ ಕೇಂದ್ರ ಮೀನುಗಾರಿಕೆ ಹಾಗೂ ಪೆಟ್ರೋಲಿಯಂ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಿದ್ದು, ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ನಾಡದೋಣಿ ಮೀನುಗಾರರ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ನಾರಾಯಣ ಕರ್ಕೇರ, ಮಲ್ಪೆ ನಾಡದೋಣಿ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಸಾಲ್ಯಾನ್, ನಾಡದೋಣಿ ಮೀನುಗಾರರ ಬೈಂದೂರು ವಲಯದ ಅಧ್ಯಕ್ಷರಾದ ಕುಮಾರ್ ಖಾರ್ವಿ, ಗಂಗೊಳ್ಳಿ ವಲಯದ ಯಶವಂತ ಖಾರ್ವಿ, ಬೇಸಿಗೆ ನಾಡದೋಣಿ ಸಂಘದ ಅಧ್ಯಕ್ಷರಾದ ಕೃಷ್ಣ, ಇಂಡೆನ್ ಗ್ಯಾಸ್ ಏಜೆನ್ಸಿಯ ದಿನೇಶ್ ಪುತ್ರನ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಸವಿತಾ ಖಾದ್ರಿ, ಪುಣೆಯ ವನಾಜ್ ಇಂಜಿನಿಯರಿಂಗ್‌ನ ಅಧಿಕಾರಿ ಮುರಳೀಧರ್, ಐಒಸಿಎಲ್ ಸಂಸ್ಥೆಯ ಹರ್ದೇವ್ ಸಿಂಗ್ ಹಾಗೂ ಮೀನುಗಾರ ಮುಖಂಡರು ಇದ್ದರು.ಫೆಡರೇಶನ್ ನಿರ್ದೇಶಕ ರಾಮಚಂದ್ರ ಕುಂದರ್ ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿದರು, ಮಟ್ಟು ಯತೀಶ್ ಕೋಟ್ಯಾನ್ ನಿರೂಪಿಸಿದರು.