ಮೇಕೆದಾಟು ಯೋಜನೆಗೆ ವನ್ಯಜೀವಿ (ವೈಲ್ಡ್ ಲೈಫ್) ಪ್ರದೇಶದಲ್ಲಿರುವ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗಲಿದ್ದು, ಅದಕ್ಕೆ ಎರಡರಷ್ಟು ಭೂಮಿಯನ್ನು ಅಂದರೆ ಸುಮಾರು ೧೨೦೦ ಹೆಕ್ಟೇರ್ ಪ್ರದೇಶವನ್ನು ಕೊಡಬೇಕಿದೆ. ಇದಕ್ಕಾಗಿ ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ಜಿಲ್ಲೆಯ ರೈತರ ಜಮೀನನ್ನು ಕಿತ್ತುಕೊಳ್ಳಲು ಸರ್ಕಾರ ಹೊರಟಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಕೆದಾಟು ಯೋಜನೆಗಾಗಿ ಮುಳುಗಡೆಯಾಗುವ ಭೂಮಿಗೆ ಬದಲಾಗಿ ರೈತರ ಜಮೀನನ್ನು ಕಿತ್ತುಕೊಳ್ಳಲು ಹೊರಟಿರುವ ಸರ್ಕಾರದ ನಡೆಯನ್ನು ಮಾಜಿ ಶಾಸಕ ಸುರೇಶ್‌ಗೌಡ ತೀವ್ರವಾಗಿ ವಿರೋಧಿಸಿದರು.

ಮೇಕೆದಾಟು ಯೋಜನೆಗೆ ವನ್ಯಜೀವಿ (ವೈಲ್ಡ್ ಲೈಫ್) ಪ್ರದೇಶದಲ್ಲಿರುವ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗಲಿದ್ದು, ಅದಕ್ಕೆ ಎರಡರಷ್ಟು ಭೂಮಿಯನ್ನು ಅಂದರೆ ಸುಮಾರು ೧೨೦೦ ಹೆಕ್ಟೇರ್ ಪ್ರದೇಶವನ್ನು ಕೊಡಬೇಕಿದೆ. ಇದಕ್ಕಾಗಿ ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ಜಿಲ್ಲೆಯ ರೈತರ ಜಮೀನನ್ನು ಕಿತ್ತುಕೊಳ್ಳಲು ಸರ್ಕಾರ ಹೊರಟಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವನ್ಯಜೀವಿ ಇಲಾಖೆಗೆ ೧೨೦೦ ಹೆಕ್ಟೇರ್ ಪ್ರದೇಶವನ್ನು ನೀಡಲು ಮಂಡ್ಯ ಜಿಲ್ಲೆಯ ೬ ತಾಲೂಕುಗಳಲ್ಲಿ ಜಮೀನನ್ನು ಗುರುತಿಸಿ, ಬಹಳ ವ್ಯವಸ್ಥಿತ ಹಾಗೂ ರಹಸ್ಯವಾಗಿ ಕಳುಹಿಸಿದ್ದಾರೆ. ಕೃಷಿ ಭೂಮಿಯನ್ನು ವಶಪಡಿಸಿಕೊಂಡರೆ ರೈತರು ಏನು ಮಾಡಬೇಕು?, ರೈತರು ಜಮೀನು, ತೋಟಗಳು ಮಾಡಿಕೊಂಡು ನೂರಾರು ವರ್ಷದಿಂದ ಬದುಕಿದ್ದಾರೆ. ಭೂಮಿಯನ್ನು ವಶಪಡಿಸಿಕೊಂಡ ರೈತರಿಗೆ ಪರ್ಯಾಯವಾಗಿ ಯಾವ ವ್ಯವಸ್ಥೆ ಮಾಡಿದ್ದೀರಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಒಂದು ಕಡೆ ನಿಜವಾದ ರೈತರಿಂದ ಭೂಮಿಯನ್ನು ಕಿತ್ತುಕೊಂಡು, ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ವ್ಯಾಪಾರೀಕರಣ ಮಾಡಲಾಗುತ್ತಿದೆ. ಇನ್ನೊಂದು ಕಡೆ ಸರ್ಕಾರ ಅಳಿದುಳಿದ ಭೂಮಿಯನ್ನು ಸಹ ಕಿತ್ತುಕೊಂಡು ಮೇಕೆದಾಟು ಯೋಜನೆಗೆ ಬರೆದಿದ್ದಾರೆ. ಈ ದಬ್ಬಾಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಕಿಡಿಕಾರಿದರು.

ವನ್ಯಜೀವಿ ಇಲಾಖೆಗೆ ಮಂಡ್ಯ ಜಿಲ್ಲೆಯ ಭೂಮಿಯನ್ನು ಕೊಡಲು ಮುಂದಾಗಿರುವುದು ಏಕೆ?, ರೈತರ ಭೂಮಿಯನ್ನು ಕಿತ್ತುಕೊಂಡರೆ ಅವರ ಜೀವನ ನಿರ್ವಹಣೆ ಹೇಗೆ?, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಡು ಭೂಮಿ ಬೇಕಾದಷ್ಟಿದೆ. ಅಲ್ಲಿ ಭೂಮಿ ಕೊಡಲಿ. ಒಂದು ಬಾರಿ ಅರಣ್ಯ ಇಲಾಖೆಯವರಿಗೆ ನೀಡಿದ ಮೇಲೆ ಅದನ್ನು ವಾಪಸ್ ತೆಗೆದುಕೊಳ್ಳುವುದು ಕಷ್ಟ. ನೀವು ಎಲ್ಲಾದರೂ ಭೂಮಿಯನ್ನು ತೆಗೆದುಕೊಳ್ಳಿ, ಎಲ್ಲಾದರೂ ಕೊಟ್ಕೊಳ್ಳಿ. ಆದರೆ ಖಾಲಿಯಾಗಿರುವ ಭೂಮಿಯನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಸರ್ಕಾರವೇ ಹೊಣೆ:

ರೈತರ ಜಮೀನು, ಭೂಮಿಗಳನ್ನು ಕಿತ್ತು ಅರಣ್ಯ ಇಲಾಖೆಯವರಿಗೆ ಕೊಡಬಾರದು. ಬಹಳ ವರ್ಷದಿಂದ ಅವರು ಹದ್ದುಬಸ್ತಿನಲ್ಲಿದ್ದಾರೆ. ನಾವು ಮತ್ತು ನಮ್ಮ ಜಾ.ದಳ ಪಕ್ಷ ರೈತರ ಪರವಾಗಿ, ಧ್ವನಿ ಎತ್ತುವಂತಹ ಕೆಲಸ ಮಾಡೇ ಮಾಡ್ತೀವಿ. ಮುಂದೆ ಆಗುವಂತಹ ಯಾವುದೇ ವ್ಯತಿರಿಕ್ತ ಪರಿಣಾಮಗಳಿಗೂ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಗಮಂಗಲ ಕ್ಷೇತ್ರದಲ್ಲಿ ಎಲ್ಲೂ ಖಾಲಿ ಭೂಮಿ ಇಲ್ಲ, ಅರಣ್ಯ ಭೂಮಿಯಲ್ಲೂ ರೈತರು ಕೃಷಿ ಮಾಡುತ್ತಿದ್ದಾರೆ. ಎಲ್ಲ ಬೆಂಗಳೂರಿನಲ್ಲೇ ಕೂತ್ಕೊಂಡು ಇದು ಅರಣ್ಯ ಪ್ರದೇಶ ಎಂದು ಕೊಟ್ಟುಬಿಟ್ಟಿದ್ದಾರೆ. ರೈತರು ಜಮೀನನ್ನು ಮಾರುವಂತಿಲ್ಲ, ಆರ್.ಟಿ.ಸಿ.ಗಳು ಬದಲಾವಣೆಗಳಾಗಲ್ಲ, ದುರಸ್ತು ಆಗಿರುವವರಿಗೂ ಭೂಮಿ ನೀಡಿದ್ದು, ಇಂದು ಅವರು ಅನುಭವದಲ್ಲಿದ್ದಾರೆ. ಈ ಭೂಮಿಯನ್ನೇ ವನ್ಯಜೀವಿ ಇಲಾಖೆಗೆ ಕೊಟ್ಟರೆ ರೈತರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆಗೆ ನಮ್ಮ ಅಡ್ಡಿಯಿಲ್ಲ. ಎಲ್ಲಿ ಭೂಮಿ ಇದೆಯೋ ಅಲ್ಲಿ ವನ್ಯಜೀವಿ ಮತ್ತು ಅರಣ್ಯ ಇಲಾಖೆಯವರಿಗೆ ನೀಡಲಿ. ಮಂತ್ರಿಗಳು ಮತ್ತು ಅಕಾರಿಗಳು ಎಲ್ಲೋ ಕೂತ್ಕೊಂಡು ಪೇಪರ್‌ನಲ್ಲಿ ಬರೆದುಕೊಟ್ಟರೆ ರೈತರ ಕಥೆ ಏನಾಗಬೇಕು? ಈ ಸಂಬಂಧವಾಗಿ ಎಲ್ಲೆಲ್ಲಿ ಭೂಮಿ ಸ್ವಾೀನಪಡಿಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸವೇ ನಂಬರ್ ಪ್ರಕಾರ ನೋಟಿಫಿಕೇಶನ್ ಹೊರಡಿಸಲಿ, ಇದು ರೈತರ ಗಮನಕ್ಕೂ ಬರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದರಖಾಸ್ತು ಸಮಿತಿಯಲ್ಲಿ ಚರ್ಚಿಸಿ ಭೂಮಿ ನೀಡಿಕೆ:

ನನ್ನ ಕಾಲದಲ್ಲೂ ಸಹ ಯಾರು ಅರ್ಜಿ ಹಾಕಿದ್ದರೋ, ಅರ್ಹರು, ನಿಜವಾಗಿ ಅನುಭವದಾರರಿದ್ದಾರೋ ಅಂತಹವರಿಗೆ ಭೂಮಿ ನೀಡಲಾಗಿದೆ. ಅದನ್ನ ಇವರು ಅಧಿಕಾರಕ್ಕೆ ಬಂದ ತಕ್ಷಣವೇ ಒಂದು ಕಟ್ಟಿಗೆಗೆ ಹಾಕಿ, ಕಟ್ಟು ಹಾಕಿ, ಲಾಕ್ ಅಂಡ್ ಕೀನಲ್ಲಿ ಇಟ್ಟುಕೊಂಡು ಕೂತಿದ್ದಾರೆ. ಆ ಸಂಬಂಧಪಟ್ಟಂತ ಜಮೀನುಗಳು ಸಹ ಈಗಾಗಲೇ ತಿದ್ದುಪಡಿಗಳು ನಡೀತಾ ಇವೆ. ಹಲವಾರು ಧೋರಣೆಗಳು ನಡೆದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕುಶಾಲ್, ಸಂತೋಷ್, ಚನ್ನಪ್ಪ, ರಾಮಲಿಂಗಯ್ಯ, ಮೇನಕ ಹಾಜರಿದ್ದರು.