ಹಾನಗಲ್ಲ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಿರಿಯ ನಾಗರಿಕರು, ಅಂಗವಿಕಲರಿಗೆ ನಿಗದಿಯಾದ ಆಸನಗಳು ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳು ಸಮಾಜಕ್ಕೆ ವಿಳಂಬವಿಲ್ಲದೆ ತಲುಪಿಸಲು ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿ ಎಂದು ಜನವೇದಿಕೆ ಅಧ್ಯಕ್ಷ ಎನ್.ಎಂ. ಪೂಜಾರ ಹೇಳಿದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ಜನ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಪ್ರಗತಿ ಪರಿಶೀಲನೆ ಹಾಗೂ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ಹಲವು ಬಾರಿ ಸರ್ಕಾರಿ ಕಚೇರಿಗಳಲ್ಲಿ ಸಂಚಾರದಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇದು ಹಿರಿಯ ನಾಗರಿಕರಿಗೆ ತೀರ ತೊಂದರೆ ತರುತ್ತಿದೆ. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ ಸೇರಿದಂತೆ ವಿವಿಧೆಡೆ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಹಾಗೂ ಮೊದಲ ಆದ್ಯತೆಯಾಗಿ ಅವರ ಕೆಲಸಗಳನ್ನು ಪೂರೈಸುವಂತಾಗಬೇಕು. ಈ ಬೇಡಿಕೆ ಹಲವು ದಿನಗಳಿಂದ ಇದ್ದರೂ ಅದು ಕೈಗೂಡುತ್ತಿಲ್ಲ. ಸರ್ಕಾರಿ ಬಸ್‌ಗಳಲ್ಲಂತೂ ಹಿರಿಯರಿಗೆ ಮೀಸಲಿರಿಸಿದ ಆಸನಗಳು ಲಭ್ಯವಾಗುವುದೇ ಇಲ್ಲ. ಇದಕ್ಕೆ ಕಟ್ಟುನಿಟ್ಟಿನ ನಿಯಮ ಮಾಡಿ ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ಗ್ರಾಪಂಗಳು ಸ್ವಚ್ಛತೆಯತ್ತ ಗಮನ ಕೊಡುತ್ತಿಲ್ಲ. ಚರಂಡಿಗಳ ಸ್ವಚ್ಛತೆಗೆ ಆದ್ಯತೆ ಸಿಗುತ್ತಿಲ್ಲ. ಇದೆಲ್ಲವನ್ನೂ ಅಧಿಕಾರಿಗಳು ಗಮನಿಸದಿದ್ದರೆ ಸಾರ್ವಜನಿಕರು ಬಲು ದೊಡ್ಡ ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದರು. ಇದೇ ಸಭೆಯಲ್ಲಿ ಹಾನಗಲ್ಲ ಕೃಷಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಅವರು ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳಾದ ಕೃಷಿಹೊಂಡ, ಯಂತ್ರೋಪಕರಣಗಳು, ಬೀಜಗೊಬ್ಬರಗಳ ವಿತರಣೆ ಮತ್ತು ರಸಗೊಬ್ಬರಗಳಲ್ಲಾಗುವ ತೊಂದರೆ, ಸಾವಯವ ಕೃಷಿ, ರಾಸಾಯನಿಕ ಬಳಕೆಯಿಂದ ಭೂಮಿ ಹಾನಿ, ಅಕಾಲಿಕ ಮಳೆ, ಹವಾಮಾನದ ವೈಪರಿತ್ಯಗಳ ಕುರಿತು ತಿಳಿಸಿದರು.ಆರೇಗೊಪ್ಪದ ಜನವೇದಿಕೆ ಮುಖಂಡರಾದ ರಘುನಾಥ ಗಾಯಕವಾಡ ಮಾತನಾಡಿ, ಉತ್ತಮ ಮಳೆಯಾಗಿ ಬೆಳೆ ಬೆಳೆಯುವ ನಿರ್ಣಾಯಕ ಸಮಯದಲ್ಲಿ ರಸಗೊಬ್ಬರ ಕೊರತೆಯುಂಟಾಗಿ ರೈತರು ದಿನಗಟ್ಟಲೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ರಸಗೊಬ್ಬರಗಳ ಜತೆಗೆ ಲಿಂಕ್ ಹಾಗೂ ಇತರ ಗೊಬ್ಬರ ಖರೀದಿಸಲು ಮಳಿಗೆಯವರು ಒತ್ತಾಯಿಸುತ್ತಿರುವುದನ್ನು ಖಂಡಿಸಿದರು.
ರೋಶನಿ ಸಂಸ್ಥೆಯ ನಿರ್ದೇಶಕರಾದ ಸಿ. ಅನಿತಾ ಡಿಸೋಜಾ ಮಾತನಾಡಿದರು. ರಾಜ್ಯದಲ್ಲಿ ರೇಷನ್ ವಿತರಣೆಯಲ್ಲಿ ಸರ್ವರ್ ಸಮಸ್ಯೆ, ಗಟಾರಗಳ ಸ್ವಚ್ಛತೆ, ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ರೈತರಿಗೆ ಜಾಗೃತಿ ಕಾರ್ಯಕ್ರಮ ಮಾಡುವುದು, ಗೊಬ್ಬರ ಮಳಿಗೆಗಳಲ್ಲಿ ಸ್ಟಾಕ್ ಬೋರ್ಡ್ ಮತ್ತು ಕೃಷಿ ಇಲಾಖೆಯ ಅಧಿಕಾರಗಳ ನಂಬರ್ ದಾಖಲಿಸುವ ಕುರಿತು ಸುದೀರ್ಘವಾಗಿ ಚರ್ಚೆ ಮಾಡಿ ಪರಿಹಾರ ಕ್ರಮಕ್ಕೆ ಒತ್ತಾಯಿಸಲಾಯಿತು.ಭೂನ್ಯಾಯ ಮಂಡಳಿಯ ನೂತನ ಸದಸ್ಯರಾದ ನರೇಗಲ್ಲ ಗ್ರಾಮದ ಎಂ.ಎ. ನೆಗಳೂರ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಗೌರವಾಧ್ಯಕ್ಷ ಎನ್.ಎಫ್. ಕಮ್ಮಾರ, ಆರ್.ಎಫ್. ತಿರುಮಲೆ, ಬಿ.ಆರ್. ಶೆಟ್ಟರ, ಮಹಾಲಿಂಗಪ್ಪ ಅಕ್ಕಿವಳ್ಳಿ, ,ಕೆ.ಎಫ್. ನಾಯ್ಕರ, ಜಯಣ್ಣ ದ್ಯಾವಣ್ಣನವರ, ಅಶೋಕ ದಾಸರ, ಪೈರೋಜಅಹ್ಮದ್ ಶಿರಬಡಿಗಿ, ಲೊಯೋಲಾ ಸಂಸ್ಥೆಯ ನಿರ್ದೇಶಕ ಜೇಸನ್ ಪಾಯಸ್, ಜನವೇದಿಕೆ ಮುಖಂಡರಾದ ರಾಮಚಂದ್ರ ಕಲ್ಲೇರ, ಬಸವರಾಜ ಕೊತಂಬ್ರಿ , ಮಂಜುನಾಥ ಕುದರಿ, ಮುನಿರಅಹ್ಮದ್ ಗೊಂದಿ, ಲಕ್ಷ್ಮೀಬಾಯಿ ಪಾಟೀಲ, ಬಂಗಾರೆಮ್ಮ ಅಂಬಿಗೇರ, ಗಂಗಾ ಗೋಣಿಬಸಣ್ಣನವರ, ನಾಗರಾಜ ಅಂಗಡಿ, ಅಬ್ದುಲ್‌ಖಾದರ ಮೂಲಿಮನಿ ಇದ್ದರು.