ಸಾವಿತ್ರಿಬಾಯಿ ಫುಲೆ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಶ್ರಮದಿಂದಾಗಿ ನೀವೆಲ್ಲ ಅಕ್ಷರವಂತರಾಗಿ, ಸರ್ಕಾರಿ ನೌಕರರಾಗಿದ್ದೀರಿ. ಇನ್ನೂ ಎಷ್ಟೋ ಜನ ಅದೇ ಹೀನಸ್ಥಿತಿಯಲ್ಲಿ ಇದ್ದಾರೆ. ಯುವಕರು ಸರಿಯಾದ ಮಾರ್ಗದರ್ಶನವಿಲ್ಲದೇ ಅತಂತ್ರರಾಗಿದ್ದಾರೆ.

ಹುಬ್ಬಳ್ಳಿ:

ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಅಕ್ಷರ ವಂಚಿತ ಸಮುದಾಯಕ್ಕೆ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿ ಇಂದು ಅವರೆಲ್ಲ ಮೂಲ ವಾಹಿನಿಗೆ ಬರುವಂತೆ ಮಾಡಿದರು. ಅದೇ ಮಾದರಿಯಲ್ಲಿ ಇಂದಿನ ಶೋಷಿತ ವರ್ಗದ ಶಿಕ್ಷಕರು ಸರ್ಕಾರಿ ಸೌಲಭ್ಯಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಬಿಇಒ ಉಮೇಶ ಬೊಮ್ಮಕ್ಕನವರ ಹೇಳಿದರು.

ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಎಸ್ಸಿ, ಎಸ್ಟಿ ಶಿಕ್ಷಕರ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಶ್ರಮದಿಂದಾಗಿ ನೀವೆಲ್ಲ ಅಕ್ಷರವಂತರಾಗಿ, ಸರ್ಕಾರಿ ನೌಕರರಾಗಿದ್ದೀರಿ. ಇನ್ನೂ ಎಷ್ಟೋ ಜನ ಅದೇ ಹೀನಸ್ಥಿತಿಯಲ್ಲಿ ಇದ್ದಾರೆ. ಯುವಕರು ಸರಿಯಾದ ಮಾರ್ಗದರ್ಶನವಿಲ್ಲದೇ ಅತಂತ್ರರಾಗಿದ್ದಾರೆ. ಇಂಥ ಸಂದರ್ಭದಲ್ಲಿ ನಿಮ್ಮೆಲ್ಲರ ಹೊಣೆಗಾರಿಕೆ ದೊಡ್ಡದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆ ಯೋಜನೆ ರೂಪಿಸಿದ್ದು, ಅವನ್ನೆಲ್ಲ ಯುವಕರಿಗೆ ತಿಳಿಸಬೇಕು. ಬೇರೆ ಬೇರೆ ರಾಜ್ಯಗಳನ್ನು ಸುತ್ತಿ ಅಲ್ಲಿನ ಬದಲಾವಣೆ ಗಮನಿಸಿ, ನಮ್ಮ ರಾಜ್ಯದಲ್ಲೂ ಅಳವಡಿಸುವ ಪ್ರಯತ್ನ ಆಗಬೇಕು ಎಂದರು.

ಬಿಇಒ ಎಚ್‌.ಎಂ. ಫಡ್ನೆಶಿ ಮಾತನಾಡಿದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯ ಘಟಕದ ಅಧ್ಯಕ್ಷ ಹೇಮಂತ ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ವೈ.ಎಸ್‌. ಶೆರೆವಾಡ, ರಾಜೇಂದ್ರ ಬಿದರಿ, ಸಿ.ವೈ. ಹೊಸಮನಿ, ಮಾರುತಿ ಭಜಂತ್ರಿ, ಸೋಮಲಿಂಗ ತಟ್ಟಿ, ಮೈಲಾರಪ್ಪ ಬೆಳಹಾರ, ರತ್ನವ್ವ ಡೊಂಬರ್ ಮುಂತಾದವರು ವೇದಿಕೆಯಲ್ಲಿದ್ದರು.