ಬೆಳೆವಿಮೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

| Published : Oct 17 2023, 12:46 AM IST

ಸಾರಾಂಶ

ಜಿಲ್ಲೆಯಲ್ಲಿ ಪ್ರಸ್ತುತ 3,26,164 ರೈತರು ಬೆಳೆ ವಿಮಾ ನೋಂದಣಿ ಮಾಡಿಸಿಕೊಂಡಿದ್ದು, ಆದರೆ ಶೇ.25ರಷ್ಟು ಸಹ ಬೆಳೆವಿಮೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ 3,26,164 ರೈತರು ಬೆಳೆ ವಿಮಾ ನೋಂದಣಿ ಮಾಡಿಸಿಕೊಂಡಿದ್ದು, ಆದರೆ ಶೇ.25ರಷ್ಟು ಸಹ ಬೆಳೆವಿಮೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕೆಲವೇ ದಿನಗಳಲ್ಲಿ ಪರಿಹಾರದ ಶೇ.25ರಷ್ಟನ್ನು ರೈತರ ಖಾತೆಗೆ ಜಮಾ ಮಾಡಿಸುವ ಭರವಸೆ ನೀಡಿದ್ದರು. ಆದರೆ ಅವರು ಭರವಸೆ ನೀಡಿ ಒಂದೂವರೆ ತಿಂಗಳು ಕಳೆದರೂ ಸರ್ಕಾರದ ಯಾವುದೇ ನಿರೀಕ್ಷೆಗೆ ಸ್ಪಂದಿಸಿಲ್ಲ. ಗ್ಯಾರಂಟಿಗೆ ನೀಡಿದ ಆದ್ಯತೆಯನ್ನು ರೈತರ ಕ್ಷೇಮಕ್ಕಾಗಿ ನೀಡದೇ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಇದುವರೆಗೂ ದಿನಕ್ಕೆ ನಿರಂತರ ಕನಿಷ್ಟ 7ತಾಸು ವಿದ್ಯುತ್ ನೀಡುತ್ತಿದ್ದು, ಈ ಸರ್ಕಾರ ಬಂದ ನಂತರದಲ್ಲಿ ಅದು ಡೋಲಾಯಮಾನವಾಗಿದೆ, ಇದೀಗ ಸಿಎಂ ಸಿದ್ದರಾಮಯ್ಯ ಐದು ಗಂಟೆ ಕಾಲ ವಿದ್ಯುತ್ ನೀಡುವಂತೆ ಸೂಚನೆ ನೀಡಿರುವುದು ರೈತರ ಮೇಲೆ ಚಾಟಿ ಬೀಸಿದಂತಾಗಿದೆ, ಕೂಡಲೇ ಸಿಎಂ ಬೇರೆಡೆಯಿಂದ ಖರೀದಿಸಿಯಾದರೂ ರೈತರಿಗೆ ವಿದ್ಯುತ್ ಕೊಡಲಿ. ಇದರಿಂದ ನಾವು ಆಹಾರ ಬೆಳೆದು ಕೊಡಲು ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇನ್ನು ರಾಜ್ಯದ ಜನರು ಇದುವರೆಗೂ ಗ್ಯಾರಂಟಿಗಳನ್ನು ನೋಡಿಕೊಂಡು ಬದುಕಿಲ್ಲ, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬೆಳೆಹಾನಿಯ ಪರಿಹಾರ ಹಾಗೂ ಸಮರ್ಪಕ ವಿದ್ಯುತ್ ನೀಡುವತ್ತ ಗಮನ ಕೊಡಲಿ, ಈ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಸಂಘದ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷ ಟಿ.ಡಿ. ಬಸವರಾಜ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯ ಘೋಷಣೆ ಇದುವರೆಗೂ ಜಾರಿಯಾಗಿಲ್ಲ, ಎಪಿಎಂಸಿಗಳು ಮುಚ್ಚುತ್ತಿದ್ದು, ಶೀಘ್ರವೇ ಆಯಾ ಪ್ರದೇಶಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಇನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ತೆರೆಯಬೇಕು. ಅದಕ್ಕೆ ಸೂಕ್ತ ಅನುದಾನ ಕಲ್ಪಿಸುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರುದ್ರಪ್ಪ ಬಳಿಗಾರ, ಶಂಕರಗೌಡ ಪಾಟೀಲ, ಶಿವನಗೌಡ ಗಾಜೀಗೌಡ್ರ, ಆನಂದ ಕೆಳಗಿನಮನಿ, ರಮೇಶ ದೊಡ್ಡೂರ ಸೇರಿದಂತೆ ಇತರರು ಇದ್ದರು.