ಸಾರಾಂಶ
ಯಲ್ಲಾಪುರ: ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ಹೊಣೆ. ಪೊಲೀಸ್ ಆಯುಕ್ತರ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ೧೧ ಜನರ ಸಾವಿಗೆ ಕಾರಣವಾಗಿದೆ. ಆದರೆ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಪೊಲೀಸರ ಮೇಲೆ ಗೂಬೆ ಕೂರಿಸಿದ ದುರಾಡಳಿತವನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಟೀಕಿಸಿದರು.
ಅವರು ಶನಿವಾರ ಟಿಎಂಎಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ತಮ್ಮ ಪ್ರಚಾರದ ತೆವಲಿಗಾಗಿ ಎರಡು ಕಾರ್ಯಕ್ರಮ ಆಯೋಜಿಸಿ, ದುರ್ಘಟನೆ ತಡೆಯಲು ಸಾಧ್ಯವಾಗದೇ ನಂತರ ಪ್ರಾಮಾಣಿಕವಾಗಿ ವೈಫಲ್ಯ ಒಪ್ಪಿಕೊಳ್ಳದೇ ಮೃತರ ಕುಟುಂಬದವರಿಗೆ ಪರಿಹಾರವನ್ನೂ ನೀಡದೇ ಇರುವುದು ಸರ್ಕಾರದ ಹೊಣೆಗೇಡಿತನ ಎಂದರು.
ಕಳೆದ ೨೮ ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನರೆಲ್ಲ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ವೇದನೆಯಲ್ಲೇ ಇದ್ದಾರೆ. ಅಂತಹ ಸಂದರ್ಭದಲ್ಲಿ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ. ನಾಚಿಕೆಗೇಡು, ಹೊಣೆಗೇಡಿತನ, ಬೇಜವಾಬ್ದಾರಿತನಕ್ಕೆ ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಉತ್ತಮ ನಿದರ್ಶನ ಎಂದರು.ಅವಕಾಶ ಇದ್ದರೂ ಸ್ಥಳೀಯ ಶಾಸಕರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಯಾಗಿದೆ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸಲಾಗದಿದ್ದರೆ ಕಾನೂನು ಪ್ರಕಾರವೇ ನಡೆಯಬೇಕೆಂದಾದರೆ ಮಂತ್ರಿಗಳ್ಯಾಕೆ, ಶಾಸಕರ‍್ಯಾಕೆ? ಎಂದು ಪ್ರಶ್ನಿಸಿದರು. ತಕ್ಷಣ ಬೇರೆ ವೈದ್ಯರ ನೇಮಕ ಆಗಬೇಕು. ಇಲ್ಲವಾದರೆ ಮೊದಲಿದ್ದ ವೈದ್ಯರನ್ನೇ ಪುನಃ ಇದೇ ಆಸ್ಪತ್ರೆಗೆ ನೇಮಿಸಬೇಕು. ಇಲ್ಲದಿದ್ದರೆ ಜನರ ವಿರೋಧವನ್ನು ಸರ್ಕಾರ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿದರು.ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಪ್ರತಿನಿಧಿ ಗಣೇಶ ಹೆಗಡೆ, ಜಿಲ್ಲಾ ಪ್ರಮುಖರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಮೋದ, ಮಾಧ್ಯಮ ಸಂಚಾಲಕ ಕೆ.ಟಿ. ಹೆಗಡೆ, ರಾಘು ಕುಂದರಗಿ ಇದ್ದರು.