ಕಬ್ಬು ಪೂರೈಕೆದಾರರ ಬಾಕಿ ಹಣ ಪಾವತಿಗೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ನಡೆಸಿದ ರೈತರ ಮೇಲೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿನಾಕಾರಣ 307 ಗಂಭೀರ ಕಲಂಗಳ ಅಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತಿರುವುದು ಖಂಡನೀಯವಾದದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಕಬ್ಬು ಪೂರೈಕೆದಾರರ ಬಾಕಿ ಹಣ ಪಾವತಿಗೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ನಡೆಸಿದ ರೈತರ ಮೇಲೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿನಾಕಾರಣ 307 ಗಂಭೀರ ಕಲಂಗಳ ಅಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತಿರುವುದು ಖಂಡನೀಯವಾದದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ದ್ವಂದ್ವ ನೀತಿಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
2025-26ನೇ ಸಾಲಿನ ಕಬ್ಬಿನ ಬಾಕಿ ಹಣ ನೀಡುವಂತೆ ರೈತರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಎಸ್.ಪಿ. ಆಗಿದ್ದ ಅಮರನಾಥ್ ರೆಡ್ಡಿಯವರು ರೈತರು ಮತ್ತು ಕಾರ್ಖಾನೆಯ ಮಾಲೀಕರ ನಡುವೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಈಗಿನ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಹಿತಕರ ಘಟನೆ ಸಂಭವಿಸಿದೆ. ರೈತರು ಹೊರಗಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ರೈತರ ತಲೆಗೆ ಕಟ್ಟಲಾಗುತ್ತಿದೆ ಎಂದು ಬಸವಂತಪ್ಪ ಕಾಂಬಳೆ ಅವರು ದೂರಿದರು.ರೈತರ ಮೇಲೆ 307 ಸೇರಿ ವಿವಿಧ ಕಠಿಣ ಕಲಂ ಹಾಕಿ ಜೈಲಿಗಟ್ಟಲಾಗುತ್ತಿದೆ. ಈಗಾಗಲೇ 17 ಜನರ ಮೇಲೆ ಕೇಸ್ ದಾಖಲಾಗಿದ್ದು, ಈಗ ಮತ್ತೆ 13 ಜನರನ್ನು ಬಂಧಿಸಲಾಗಿದೆ. ಒಟ್ಟು 81 ರೈತರನ್ನು ಗುರಿಯಾಗಿಸಿಕೊಂಡು ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಆದರೆ ಮಹಾಲಿಂಗಪುರ ಮತ್ತು ಮುಧೋಳ ಪೊಲೀಸ್ ಠಾಣೆಗಳಲ್ಲಿ ರೈತರು ಕಾರ್ಖಾನೆಯ ಮಾಲೀಕರ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿದೆ ಎಂದು ರೈತ ಮುಖಂಡ ಮಹೇಶ ಪಾಟೀಲ ಆರೋಪಿಸಿದರು.
ಮುಧೋಳ ತಾಲೂಕಿನ ರೈತರ ಹೋರಾಟ ಸಂಪೂರ್ಣವಾಗಿ ಗಾಂಧಿವಾಧಿ ಹಾಗೂ ಶಾಂತಿಯುತವಾಗಿದೆ. ಇದು ಯಾವುದೇ ರಾಜಕೀಯ ಪಕ್ಷದ (ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್) ಪ್ರೇರಿತ ಹೋರಾಟವಲ್ಲ ಎಂದು ಸ್ಪಷ್ಟಪಡಿಸಿದರು.ಜೈಲು ಭರೋ ಹೋರಾಟದ ಎಚ್ಚರಿಕೆ:ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು ಕಬ್ಬಿನ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 3 ದಿನಗಳ ಗಡುವು ನೀಡಲಾಗುವುದು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯಾದ್ಯಂತ ರೈತರು ಬೀದಿಗಿಳಿದು ಜೈಲು ಭರೋ ಚಳವಳಿ ಹಮ್ಮಿಕೊಳ್ಳಲಾಗುವುದೆಂದು ಸಂಘಟನೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಸರ್ಕಾರ ಘೋಷಿಸಿದ ₹50 ಹಾಗೂ ಐಸಿಪಿಎಲ್ ಸಕ್ಕರೆ ಕಾರ್ಖಾನೆ ನೀಡಿದ ಸಹಾಯಧನ ಸೇರಿ ಒಟ್ಟು ₹100 ನೀಡಿರುವ ಕಾರ್ಖಾನೆಗೆ ಇದೇ ವೇಳೆ ರೈತ ಸಂಘ ಕೃತಜ್ಞತೆ ಸಲ್ಲಿಸಿತು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುಭಾಸ ಶಿರಬೂರ, ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶ ಪಾಟೀಲ, ಸುರೇಶ ಚಿಂಚಲಿ, ನಿಂಗಪ್ಪ ಹೊಸಕೋಟೆ, ಕರೆಪ್ಪ ರಾಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.