ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶಿಕ್ಷಣ ಕ್ಷೇತ್ರಕ್ಕೆ ಇಂದಿನ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವುದನ್ನು ಬಿಟ್ಟು, ಬಡ ಮಕ್ಕಳ ಶಾಲಾ ಕಟ್ಟಡ ನಿರ್ಮಾಣದಲ್ಲೂ ಇವರು ಕಮಿಷನ್ ಹೊಡೆಯುತ್ತಿದ್ದಾರೆ, ಇನ್ನು ಎರಡು ವರ್ಷವಷ್ಟೇ ಸುಮ್ಮನಿರಿ. ಅಗತ್ಯ ಬದಲಾವಣೆಯನ್ನು ನಾನು ಮಾಡಿ ತೋರಿಸುವೆ ಎಂದು ಶಾಸಕ ಎಚ್.ಡಿ.ರೇವಣ್ಣ ಆತ್ಮವಿಶ್ವಾಸದಿಂದ ನುಡಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರ ೧೩೭ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಶಿಕ್ಷಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡುವ ಜತೆಗೆ ಪೂರ್ವಿಕರು ಸ್ಥಾಪಿಸಿದ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಪ್ರತಿ ಹೋಬಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನೀಡುವ ಶಿಕ್ಷಣದಿಂದ ಬಡವರ ಮಕ್ಕಳು ಶೇ.೯೫ಕ್ಕೂ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟರೆ ಶೇ.೧೦೦ರಷ್ಟು ಅಂಕ ಜತೆಗೆ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು.ಶಾಸಕ ಎ.ಮಂಜು ಮಾತನಾಡಿ, ಇಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಹಳ ಸಂತೋಷಪಟ್ಟಿದ್ದೇನೆ. ಶಿಕ್ಷಕರು ನೀಡಿದ ಶಿಕ್ಷಣ, ಮಾರ್ಗದರ್ಶನದಿಂದ ಶಾಸಕನಾಗಲು ಸಾಧ್ಯವಾಗಿದೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯ ಶ್ರೇಯಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮ, ನೀಡಿದ ಮಾರ್ಗದರ್ಶನ ಮತ್ತು ಎಚ್ಚರಿಕೆಯ ನುಡಿಗಳಿವೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಕೈಮುಗಿದು ನಮಸ್ಕರಿಸಿದರು.
ಹಾಸನದ ಎವಿಕೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ. ಸೀ.ಚ.ಯತೀಶ್ವರ್ ಪ್ರಧಾನ ಭಾಷಣ ಮಾಡಿದರು.ಇದೇ ವೇಳೆ ಮೃತಪಟ್ಟ ಶಿಕ್ಷಕರು ಹಾಗೂ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನೆ ಮಹೋತ್ಸವದ ಸಂದರ್ಭ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೇವೆಯಲ್ಲಿದ್ದಾಗ ನಿಧನರಾದ ಶಿಕ್ಷಕರ ಕುಟುಂಬದವರಿಗೆ ಸಾಂತ್ವನ ಹಾಗೂ ಗೌರವ ಸಮರ್ಪಣೆ ಜತೆಗೆ ನಿವೃತ್ತ ಶಿಕ್ಷಕರು, ಉಪನ್ಯಾಸಕರು, ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.ಪಟ್ಟಣದ ಬ್ಯಾಂಕ್ ಆಫ್ ಬರೋಡ ಶಾಖೆಯವರು ಇಒ ಸೋಮಲಿಂಗೇಗೌಡರ ಮಾರ್ಗದರ್ಶನದಲ್ಲಿ ೮ ಉತ್ತಮ ಶಿಕ್ಷಕರನ್ನು ಗುರುತಿಸಿ, ಶಾಸಕರಿಂದ ಸನ್ಮಾನಿಸಲಾಯಿತು.
ಶಿಕ್ಷಕಿ ಪುಷ್ಪಲತಾ ತಂಡದಿಂದ ಪ್ರಾರ್ಥಿಸಿದರು, ಉಮೇಶ್ ತಂಡದಿಂದ ನಾಡಗೀತೆ ಹಾಗೂ ರೈತಗೀತೆ ಹಾಡಿದರು, ಬಿಇಒ ಸೋಮಲಿಂಗೇಗೌಡ ಸ್ವಾಗತಿಸಿದರು ಹಾಗೂ ಶಿವಕುಮಾರಾಚಾರ್ ನಿರೂಪಿಸಿದರು.ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಬ್ಯಾಂಕ್ ಆಫ್ ಬರೋಡ ಶಾಖೆಯ ಚೈತ್ರ, ತಾ.ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಕ್ಷೇತ್ರ ಸಮನ್ವಯಾಧಿಕಾರಿ(ಪ್ರಭಾರ) ಕಾಳೇಗೌಡ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಾಲಿಂಗ, ತಾಪಂ ಇಒ ಮುನಿರಾಜ್, ಪ್ರಾಂಶುಪಾಲರಾದ ಕುಮಾರಸ್ವಾಮಿ ಹಾಗೂ ದೇವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಹಿರಿಯ ಶಿಕ್ಷಕರಾದ ಸೋಮಣ್ಣಯ್ಯ, ಎಂ.ಟಿ.ರಂಗಸ್ವಾಮಿ, ಗಣೇಶ್, ಕಾಂತರಾಜು ಎಚ್.ಎಚ್., ಎಸ್.ಎನ್.ಎಂ.ಖಾದ್ರಿ, ಸುಜಾತ, ಅಲಿ, ಶೇಖರ್, ಜನಾರ್ದನ್, ಇತರರು ಇದ್ದರು.
-