ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಮತ್ತು ಪ್ರತಿಭಾವಂತ ಮಕ್ಕಳು ಇದ್ದು ಅವರಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್ ಹೇಳಿದರು.ಪಟ್ಟಣದ ಬಸವ ಚೇತನ ಎಜುಕೇರ್ ಶಾಲೆಯ ಆವರಣದಲ್ಲಿ ಬಂಧುತ್ವ ಫೌಂಡೇಷನ್ ವತಿಯಿಂದ ಈಜಿ-ಪೀಜಿ ಕ್ಲಾಸಸ್‌ನ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ನವೋದಯ, ಮೊರಾರ್ಜಿ, ಸೈನಿಕ ಮತ್ತು ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತೇಜಸ್ವಿ ವಿ.ಪಟೇಲ್ ಎಜುಕೇಷನ್ ಪ್ರೋಗ್ರಾಂ ಹೆಸರಿನಲ್ಲಿ ಉಚಿತ ಆನ್‌ಲೈನ್ ತರಬೇತಿಯ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಬಸವ ಚೇತನ ಎಜುಕೇರ್‌ನ ಡಿಜಿಟಲ್ ಕೊಠಡಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನಮ್ಮ ಸರ್ಕಾರಗಳು ಮುಗ್ಗರಿಸಿವೆ ಎಂದರು.
ಕೇಂದ್ರ ಸರ್ಕಾರದ ವತಿಯಿಂದ ನಡೆಯುತ್ತಿರುವ ನವೋದಯ ಶಾಲೆಗಳ ಮಾದರಿಯಲ್ಲಿ ಶಿಕ್ಷಣ ವನ್ನು ನೀಡುವ ಉದ್ದೇಶದಿಂದ ಈ ಕ್ಷೇತ್ರದಿಂದ ಶಾಸಕರಾಗಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಿದರು ಎಂದು ತಿಳಿಸುತ್ತಾ ಪ್ರಸ್ತುತ ಶಿಕ್ಷಣ ಶ್ರೀಮಂತರ ಪಾಲಾಗುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ಬರಬೇಕಾಗಿದೆ ಎಂದರು.ಸರ್ಕಾರ ಮತ್ತು ಸಮಾಜದ ವೈಪಲ್ಯದಿಂದ ಸರ್ಕಾರಿ ಶಾಲೆಗಳು ನಲುಗಿಹೋಗುತ್ತಿದ್ದು ನಮ್ಮ ಪೋಷಕರುಗಳು ಸಹಾ ಸರ್ಕಾರಿಶಾಲೆಗಳು ಎಂದರೆ ತಾತ್ಸಾರದಿಂದ ನೋಡುವುದನ್ನು ಬಿಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ, ಬಡ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಅಗತ್ಯವಾಗಿದ್ದು ನವೋದಯ, ಮೊರಾರ್ಜಿ ಶಾಲೆಗಳಿಗೆ ಪ್ರವೇಶ ಪಡೆಯಲು ತರಬೇತಿ ಅವಶ್ಯಕವಾಗಿದ್ದು ಅಂತಹ ತರಬೇತಿಯನ್ನು ಈ ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡುತ್ತೀರುವುದು ಬಡವರ್ಗದ ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ ಎಂದರು.ಬಡತನ ಇದೆ ಎಂದು ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ದಿಂದ ವಂಚಿತರನ್ನಾಗಿ ಮಾಡದೆ ಬಡತನದ ಮಧ್ಯೆಯೂ ಉನ್ನತ ಶಿಕ್ಷಣವನ್ನು ನಿಮ್ಮ ಮಕ್ಕಳಿಗೆ ನೀಡಿದರೆ ನಿಮ್ಮ ಮಕ್ಕಳು ಸಮಾಜದ ಆಸ್ತಿಗಳಾಗುತ್ತಾರೆ ಎಂದರು.
ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಚ್.ಎಸ್.ಮಂಜುನಾಥ್, ಪತ್ರಕರ್ತ ಜಿಗಳಿ ಪ್ರಕಾಶ್, ತಾಲೂಕು ಕ.ಸಾ.ಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜ್, ವಿರೇಶ್ ಪ್ರಸಾದ್, ಈಜಿ-ಪಿಜಿ ಕ್ಲಾಸಸ್ ನ ಸಂಸ್ಥಾಪಕ ಶ್ರೀವತ್ಸ, ದಾವಣಗೆರೆ ಬಂಧುತ್ವ ಫೌಂಡೇಷನ್‌ನ ಅಧ್ಯಕ್ಷ ರಾಘುದೊಡ್ಡಮನಿ ಹಾಜರಿದ್ದರು.