ಸಾರಾಂಶ
ಬರ ನಿರ್ವಹಣೆ ಹಣ ಬಳಕೆ ಮಾಡುವಲ್ಲಿ ಸರ್ಕಾರ ವಿಫಲ : ಆರಗ ಜ್ಞಾನೇಂದ್ರ
ಕೇಂದ್ರ ಕೊಟ್ಟಿರುವ 900 ಕೋಟಿ ರು. ಬಳಕೆಯಾಗಿಲ್ಲ, ವೈಜ್ಞಾನಿಕವಾಗಿ ಬೆಳೆ ಹಾನಿ ಗುರುತಿಸಬೇಕು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ ಕೊಟ್ಟಿರುವ 900 ಕೋಟಿ ರು. ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ಹಣವನ್ನು ಬಳಕೆ ಮಾಡಲು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರದಿಂದ ಮಾರ್ಗ ಸೂಚಿಗಳು ಬಂದಿಲ್ಲ ಎಂದರು. ರಾಜ್ಯದಲ್ಲಿ ಬರಗಾಲ ಇದೆ. ಈ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯಿಂದ ಪ್ರವಾಸ ನಡೆಸಲಾಗುತ್ತಿದೆ. ಸ್ಥಳೀಯ ನೈಜ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೇಂದ್ರಕ್ಕೆ ವರದಿ ಸಲ್ಲಿಸಲು ಪ್ರವಾಸ ನಡೆಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಂಕಷ್ಟಕ್ಕೆ ಸ್ಪಂಧಿಸಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದರು. ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಹೋಗುವುದಾಗಲೀ, ಸಭೆ ನಡೆಸುವುದಾಗಲೀ ಪ್ರಯತ್ನ ಮಾಡಲಿಲ್ಲ. ಬೆಳೆ ಹಾನಿಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ ಎಂದು ಹೇಳಿದರು. ಮಳೆ ಇಲ್ಲದೆ ಬೆಳೆ ಹಾಳಾಗಿದೆ. ಅಂತರ್ಜಲ ಕುಸಿದು ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಬದ್ಧತೆ, ಕಾಳಜಿ ಮುಖ್ಯ. ಆದರೆ, ಮುಖ್ಯಮಂತ್ರಿಯವರಿಂದ ಈ ನಿಟ್ಟಿನಲ್ಲಿ ಕೆಲಸ ಆಗಿಲ್ಲ. ಬರೀ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಬರಗಾಲ ಬಂದಿದ್ದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಬೀದಿ ಬೀದಿ ಸುತ್ತಿ ಜನರ ನೆರವಿಗಾಗಿ ಹಣ ಸಂಗ್ರಹ ಮಾಡಿದ್ದರು. ಅವರು ಸಿಎಂ ಆಗಿದ್ದಾಗ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದರು ಎಂದರು. 5 ಲಕ್ಷ ರು. ಸಿಗುತ್ತದೆ ಎಂಬ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಸರ್ಕಾರದ ಸಚಿವರು ಹೇಳಿದ್ದರು. ಇದು, ಬೇಜವಾಬ್ದಾರಿ ಹೇಳಿಕೆ. ಇದು, ರೈತ, ಜನ ವಿರೋಧಿ ಸರ್ಕಾರ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್, ವಿಧಾನಪರಿಷತ್ ಸದಸ್ಯ ಅರುಣ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಆನಂದಪ್ಪ, ದೇವರಾಜ್ ಶೆಟ್ಟಿ, ಟಿ. ರಾಜಶೇಖರ್, ದೀಪಕ್ ದೊಡ್ಡಯ್ಯ, ಪುಷ್ಪರಾಜ್ ಉಪಸ್ಥಿತರಿದ್ದರು. ----- ಬಾಕ್ಸ್ -----ಸಮರ್ಪಕ ಬೆಳೆ ಇಲ್ಲದೇ ರೈತಾಪಿ ವರ್ಗ ಕಂಗಾಲು: ಜ್ಞಾನೇಂದ್ರ ಅಸಮಾಧಾನ
ಚಿಕ್ಕಮಗಳೂರು: ತಾಲೂಕಿನ ಬಹುತೇಕ ಹೋಬಳಿಗಳು ಬರಪೀಡಿತ ಪ್ರದೇಶಗಳಾಗಿದ್ದು ಮಳೆ ಕೊರತೆಯಿಂದ ಕೆರೆಗಳು ಬತ್ತಿ ಹೋಗಿರುವ ಪರಿಣಾಮ ಸೂಕ್ತ ಬೆಳೆ ದೊರೆಯದೇ ರೈತರು ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಎಸ್.ಬಿದರೆ, ಭಕ್ತರಹಳ್ಳಿ ಹಾಗೂ ವಡ್ಡರಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ತಂಡದೊಂದಿಗೆ ಪ್ರವಾಸ ಮಾಡಿ ಬೆಳೆ ಹಾನಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಭಾಗ ಬರಪೀಡಿತ ಪ್ರದೇಶವಾಗಿದ್ದರೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಒದಗಿಸದೇ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ಈ ಭಾಗದ ಪ್ರಮುಖ ಬೆಳೆಗಳಾದ ರಾಗಿ, ಜೋಳ ಹಾಗೂ ತರಕಾರಿಗಳು ಬಹುತೇಕ ನಾಶವಾಗಿವೆ. ಅತಿ ಮುಖ್ಯವಾದ ಬತ್ತವು ಕೂಡಾ ಸಂಪೂರ್ಣ ನೆಲಕಚ್ಚಿದ ಪರಿಣಾಮ ಆಹಾರ ಪದಾರ್ಥಗಳಿಗೆ ಅಭಾವ ಉಂಟಾಗಿದೆ. ಇದರಿಂದ ರೈತರ ಪಾಡು ಮುಂದೆನೆಂಬುದು ತಿಳಿಯದಾಗಿದ್ದು ಈ ಬಗ್ಗೆ ರಾಜ್ಯಸರ್ಕಾರ ಕಣ್ಣೆತ್ತಿ ನೋಡದೆ ಜನ ವಿರೋಧಿ ಆಡಳಿತ ನೀಡುತ್ತಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಜಿಪಂ ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಚ್.ಅರುಣ್ ಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೆ.ಆರ್.ಆನಂದಪ್ಪ, ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಉಪಾಧ್ಯಕ್ಷ ಡಾ.ನರೇಂದ್ರ, ಮುಖಂಡರಾದ ದೀಪಕ್ ದೊಡ್ಡಯ್ಯ, ದಿನೇಶ್ ಪಾದಮನೆ ಇದ್ದರು.11 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಬರ ಪೀಡಿತ ಪ್ರದೇಶಕ್ಕೆ ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ಅಧ್ಯಯನ ತಂಡ ಶನಿವಾರ ಭೇಟಿ ನೀಡಿ ಹಾನಿಯಾಗಿರುವ ಬೆಳೆಯನ್ನು ವೀಕ್ಷಿಸಿತು.