ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಧಾರ: ಶಾಸಕ ಸಿ.ಸಿ. ಪಾಟೀಲ

| Published : Nov 06 2025, 02:15 AM IST

ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಧಾರ: ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವನಿದ್ದ ಸಂದರ್ಭದಲ್ಲಿ ನರಗುಂದ ಪಟ್ಟಣದಲ್ಲಿದ್ದ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಹೊಳೆಆಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಹೊಳೆಆಲೂರು: ಬಡಜನತೆಯ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಹಾಗೂ ವೈದ್ಯರ ಪಾತ್ರ ಪ್ರಮುಖವಾಗಿದ್ದು, ಆಧುನಿಕ ದಿನಮಾನಗಳಲ್ಲಿ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಡಜನತೆಗೆ ಸರ್ಕಾರಿ ಆಸ್ಪತ್ರೆಗಳೆ ಆಧಾರವಾಗಿವೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಕರ್ನಾಟಕ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂ ವತಿಯಿಂದ ನಿರ್ಮಿಸಿದ ನೂತನ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಬಡರೋಗಿಗಳು ಉತ್ತಮ ಚಿಕಿತ್ಸೆ ಪಡೆದಾಗ ಮಾತ್ರ ಸರ್ಕಾರ ಖರ್ಚು ಮಾಡಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ ಉದ್ದೇಶ ಸಾರ್ಥಕವಾಗುತ್ತದೆ. ನನ್ನ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಸಚಿವನಿದ್ದ ಸಂದರ್ಭದಲ್ಲಿ ನರಗುಂದ ಪಟ್ಟಣದಲ್ಲಿದ್ದ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಹೊಳೆಆಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು ಎಂದರು.

ಕಳೆದ ಅವಧಿಯಲ್ಲಿ ಹೊಳೆಆಲೂರು ಗ್ರಾಮದಲ್ಲಿ ನಿರ್ಮಾಣಗೊಂಡ ಬಹುತೇಕ ಹೊಸ ಕಟ್ಟಡಗಳು ನನ್ನ ಅವಧಿಯ ಕೊಡುಗೆಗಳಾಗಿದ್ದು, ಪ್ರವಾಹ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ನನಗಿದೆ ಎಂದರು.

ಇದೆ ವೇಳೆ ಪ್ರತಿಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಶಾಸಕ ಪಾಟೀಲ, ಕೆಲವರು ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೂಳ್ಳಲು ಪೈಪೋಟಿಗೆ ಇಳಿದಿದ್ದು, ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುವ ಬದಲು ಜನರ ಮನಸ್ಸಿನಲ್ಲಿ ಹೆಸರು ಉಳಿಯುವಂತೆ ಕೆಲಸ ಮಾಡಲಿ ಎಂದರು.

ಡಾ. ಎಚ್.ಎಲ್. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಳೆಆಲೂರು ಗ್ರಾಮದಲ್ಲಿ 1962ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ನಂತರ 2012ರಲ್ಲಿ ಆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡಲಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆ ಆರೋಗ್ಯ ಸೇವೆಗಳನ್ನು ವಿಸ್ತರಿಸಬೇಕಾಗಿದ್ದರಿಂದ 2023ರಲ್ಲಿ ಶಾಸಕ ಸಿ.ಸಿ. ಪಾಟೀಲರ ಕೋರಿಕೆಯ ಮೇರೆಗೆ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು ಸೇರಿದಂತೆ ವೈದ್ಯರನ್ನು ಒದಗಿಸುವ ಜತೆಗೆ ಆಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಹೊಳೆಆಲೂರು ಗ್ರಾಮದಲ್ಲಿ ನಿರ್ಮಿಸಲಾಗಿದ್ದು ಗ್ರಾಮಸ್ಥರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಾನ್ನಿಧ್ಯವನ್ನು ಯಚ್ಚರೇಶ್ವರ ಮಠದ ಯಚ್ಚರೇಶ್ವರ ಸ್ವಾಮೀಜಿ ವಹಿಸಿದ್ದರು. ಡಿಎಚ್‌ಒ ಎಸ್.ಎಸ್. ನೀಲಗುಂದ, ಗ್ರಾಪಂ ಅಧ್ಯಕ್ಷೆ ಚಂದವ್ವ ಪೂಜಾರ, ರೋಣ ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ, ಸೋಮಲಿಂಗಪ್ಪ ಚರೇದ, ಮುತ್ತಣ್ಣ ಜಂಗಣ್ಣವರ, ಎ.ಎನ್. ಬಡಿಗೇರ, ಶೇಖಣ್ಣ ತೋಟದ, ಶ್ರೀಪತಿ ಉಡುಪಿ, ಶಿವಕುಮಾರ ನೀಲಗುಂದ, ಮೋತಿಲಾಲ ರಾವಳ, ರಾಮನಗೌಡ ಪಾಟೀಲ, ಶಶಿಧರ ಪಾಟೀಲ, ಶೇಖಪ್ಪ ಮಾದರ, ಬಿ.ಎಸ್. ಭಜಂತ್ರಿ, ಕೆ.ಎ. ಹಾದಿಮನಿ ಸೇರಿದಂತೆ ಇತರರು ಇದ್ದರು.