ಮಣಿದ ಸರ್ಕಾರ: ಮುಗಿಯದ ಗೊಂದಲ

| Published : Nov 08 2025, 03:00 AM IST

ಸಾರಾಂಶ

ಕಬ್ಬಿನ ದರ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಗೊಂದಲದ ಗೂಡಾಗಿದೆ. ಸರ್ಕಾರದ ನಿರ್ಧಾರವನ್ನು ರೈತರು ಸುತಾರಂ ಒಪ್ಪುತ್ತಿಲ್ಲ. ಸರ್ಕಾರದ ಬೆಲೆ ನಿಗದಿ ಮಾಡಿರುವುದು ರೈತರ ಆಶಯದ ಜಯವಾದರೂ, ಇದನ್ನು ಅಂತಿಮ ಜಯ ಎಂದು ಹೇಳಲಾಗುವುದಿಲ್ಲ. ಸರ್ಕಾರ ಕೇವಲ ಬೆಲೆ ನಿಗದಿ ಘೋಷಿಸಿದೆ. ಆದರೆ, ಅದು ಅನುಷ್ಠಾನಕ್ಕೆ ಎಷ್ಟರ ಮಟ್ಟಿಗೆ ಬರುತ್ತದೆ ಎನ್ನುವ ಪ್ರಶ್ನೆಯೂ ರೈತರನ್ನು ಕಾಡುತ್ತಿದೆ.

ಕನ್ನಡಪ್ರ ವಾರ್ತೆ ಬೆಳಗಾವಿ

ಕಬ್ಬಿನ ದರ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಗೊಂದಲದ ಗೂಡಾಗಿದೆ. ಸರ್ಕಾರದ ನಿರ್ಧಾರವನ್ನು ರೈತರು ಸುತಾರಂ ಒಪ್ಪುತ್ತಿಲ್ಲ. ಸರ್ಕಾರದ ಬೆಲೆ ನಿಗದಿ ಮಾಡಿರುವುದು ರೈತರ ಆಶಯದ ಜಯವಾದರೂ, ಇದನ್ನು ಅಂತಿಮ ಜಯ ಎಂದು ಹೇಳಲಾಗುವುದಿಲ್ಲ. ಸರ್ಕಾರ ಕೇವಲ ಬೆಲೆ ನಿಗದಿ ಘೋಷಿಸಿದೆ. ಆದರೆ, ಅದು ಅನುಷ್ಠಾನಕ್ಕೆ ಎಷ್ಟರ ಮಟ್ಟಿಗೆ ಬರುತ್ತದೆ ಎನ್ನುವ ಪ್ರಶ್ನೆಯೂ ರೈತರನ್ನು ಕಾಡುತ್ತಿದೆ.

ಪ್ರತಿಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಹೋರಾಟ ಶುರು ಮಾಡಿದ್ದರು. ಕಳೆದ 9 ದಿನಗಳಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ, ರಾಜ್ಯ ಸರ್ಕಾರದ ಬೆಲೆ ನಿಗದಿ ಮಾಡಿರುವುದು ರೈತರ ಹೋರಾಟದ ಕಾವನ್ನು ತಣ್ಣಗಾಗಿದೆ. ಈ ಮೂಲಕ ಸರ್ಕಾರ ಬೀಸುವ ದೊಣ್ಣೆಯಿಂದ ಪಾರಾಗಿದೆ.ಸರ್ಕಾರ ಪ್ರತಿ ಟನ್ ಕಬ್ಬಗೆ ₹3300 ದರ ನಿಗದಿ ಮಾಡಿದೆ ನಿಜ. ಆದರೆ, ಈ ದರ 11.25 ಇಳುವರಿ ಹೊಂದಿದ ಕಬ್ಬಿಗೆ ಮಾತ್ರ ಅನ್ವಯವಾಗುತ್ತದೆ. ಹಾಗಾಗಿ, ಎಲ್ಲ ರೈತರು ಸಂಭ್ರಮಿಸುವಂತಿಲ್ಲ. ಒಂದೇ ಕಂತಿನಲ್ಲಿ ₹3200 ಹಾಗೂ ₹100 ಪಾವತಿಗೆ ಆರು ತಿಂಗಳ ಕಾಲಾವಕಾಶದ ಷರತ್ತನ್ನು ವಿಧಿಸಿದೆ. ಸಕ್ಕರೆ ಲಾಬಿಗೆ ಮಣಿದು ಸರ್ಕಾರ ಬೆಲೆ ನಿಗದಿ ಪಡಿಸುವುದು ಮೇಲ್ನೋಟಕ್ಕೆ ಸ್ಪಷ್ಪವಾಗುತ್ತದೆ. ರೈತರ ಹೋರಾಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದೆ. ರೈತರ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿಲ್ಲ. ರೈತರ ಹೋರಾಟದ ದಾರಿ ತಪ್ಪಿಸುವ ಯತ್ನವನ್ನು ಸರ್ಕಾರ ಮಾಡಿದೆ. ರೈತರಿಗೆ ಯಾವ ನ್ಯಾಯವೂ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.ಮೂಡಲಗಿ ತಾಲೂಕಿನ ಗುರ್ಲಾಪುರ ಕಬ್ಬು ಬೆಳೆಗಾರರ ಹೋರಾಟದ ಕೇಂದ್ರಬಿಂದುವಾಗಿತ್ತು. ಎಂದಿಗೂ ಸುದ್ದಿಯಲ್ಲಿ ಕಾಣದ ಗುರ್ಲಾಪುರಕ್ಕೆ ನಾನಾ ಹಳ್ಳಿಗಳಿಂದ, ನಾನಾ ಸಂಘಟನೆಗಳಿಂದ ರೈತರು ಆಗಮಿಸಿ ಹೋರಾಟದಲ್ಲಿ ಭಾಗಿಯಾದರು. ಇದು ರೈತರ ಐತಿಹಾಸಿಕ ಹೋರಾಟವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬೆಲೆ ನಿಗದಿ ಆದೇಶದ ಬಗ್ಗೆ ರೈತರಲ್ಲಿ ಹಲವು ಪ್ರಶ್ನೆಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ.ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಸರ್ಕಾರದ ತೀರ್ಮಾನ ನಮಗೆ ತೃಪ್ತಿಕರವಾಗಿಲ್ಲ. ಇಳುವರಿ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡಿರುವ ತೀರ್ಮಾನ ಅವೈಜ್ಞಾನಿಕವಾಗಿದೆ. ರೈತರನ್ನು ಒಡೆದಾಳುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಮುಖ್ಯಮಂತ್ರಿಗಳು ಸಕ್ಕರೆ ಮಾಲೀಕರ ಲಾಬಿಗೆ ಮಣಿದು, ಕಬ್ಬಿನ ದರ ನಿಗದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದ ತೀರ್ಮಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

-ಸಿದಗೌಡ ಮೋದಗಿ, ರೈತ ಮುಖಂಡರು.