ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡುತ್ತಿಲ್ಲ. ಈ ಸರ್ಕಾರವು ಖಾಸಗಿ ಕಾಲೇಜುಗಳ ಮಾಲೀಕರ ಜೊತೆ ಶಾಮೀಲಾಗಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಗಂಭೀರವಾಗಿ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ೨೬ಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳಿದ್ದು, ಇದರಲ್ಲಿ ನಾಲ್ಕು ಮಹಿಳಾ ಕಾಲೇಜುಗಳಿವೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವವರೆಗೂ ೪೮ ತಾಲೂಕು ಕೇಂದ್ರಗಳಲ್ಲೆ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಕಾಲೇಜುಗಳು ಆರಂಭವಾಗಿ ಈಗಾಗಲೇ ಒಂದೂವರೆ ತಿಂಗಳು ಕಳೆಯುತ್ತಿದ್ದರೂ ಈವರೆಗೆ ಸಮರ್ಪಕ ಬೋಧಕ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಲು ಆಗಿಲ್ಲ. ಪ್ರಾಂಶುಪಾಲರೇ ಕಸ ಗುಡಿಸುವಂತಾಗಿದೆ. ಸರ್ಕಾರಕ್ಕೆ ಏನು ಕಾಯಿಲೆ ಹಿಡಿದಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲ ಎಂದು ವಿದ್ಯಾರ್ಥಿಗಳು ಖಾಸಗಿ ಕಾಲೇಜಿಗೆ ಹೋಗುತ್ತಾರೆ. ಅರೆಕಾಲಿಕ ಉಪನ್ಯಾಸಕರನ್ನೋ ಇಲ್ಲವೇ ಕಾಯಂ ಉಪನ್ಯಾಸಕರನ್ನಾದರೂ ಹಾಕಿ. ಬಡವರ ಬಗ್ಗೆ ಮೊದಲು ಚಿಂತನೆ ಮಾಡಿ. ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಬದಲಾಗಿ ಖಾಸಗಿ ಶಾಲೆಗಳ ಜೊತೆ ಶಾಮೀಲಾಗಿರುವ ಸರ್ಕಾರ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಮುಗಿಯುವುದನ್ನು ಕಾಯುತ್ತಿದೆ ಎಂದು ಆರೋಪಿಸಿದರು.ವಿಲೀನ ಮಾಡಲಿ: ಕೂಡಲೇ ಸರ್ಕಾರ ಕಾಯಂ ಅಥವಾ ಅರೆಕಾಲಿಕ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲಿ. ಎಲ್ಲಾ ಸರ್ಕಾರಿ ಕಾಲೇಜುಗಳನ್ನು ಖಾಸಗೀಕರಣ ಮಾಡಲಿ. ರಾಜ್ಯ ಸರಕಾರವು ತನ್ನ ಗ್ಯಾರಂಟಿಗಾಗಿ ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕೆ ಆಗುವುದಿಲ್ಲ. ದಯಮಾಡಿ ಖಾಸಗಿ ಶಾಲೆಗೆ ಹೋಗಿ ಎಂದು ಹೇಳಿಬಿಡಿ ಎಂದು ಬೇಸರದಲ್ಲಿ ಹೇಳಿದರು.
ಶಿಕ್ಷಣ ಕೊಡಿ: ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ವರ್ಗಾವಣೆ ದಂಧೆ ಏನಾದರೂ ಮಾಡಿಕೊಂಡು ಹಾಳುಬಿದ್ದು ಹೋಗಲಿ. ನಾನು ಬಡವರ ಮಕ್ಕಳಿಗೆ ಒಂದು ಉತ್ತಮವಾದ ಶಿಕ್ಷಣ ಕೊಡಿ ಎಂದು ಮನವಿ ಮಾಡುತ್ತೇನೆ. ಹೊಳೆನರಸೀಪುರದ ಕಾಲೇಜಿಗ ಬಂದ ಹಣವನ್ನು ಅರಸೀಕೆರೆಗೆ ವರ್ಗಾಯಿಸಿಕೊಂಡಿದ್ದಾರೆ. ಈಗಾಗಲೇ ಅರಸೀಕೆರೆಗೆ ೨ ಕೋಟಿ ಬಂದಿದ್ದರೂ ಸಾಕಾಗುವುದಿಲ್ಲ ಎಂದು ಈ ೭೫ ಲಕ್ಷವನ್ನು ವರ್ಗಾಯಿಸಿಕೊಂಡಿದ್ದಾರೆ. ಇನ್ನೂ ಮೂರು ವರ್ಷಗಳ ಕಾಲ ತಡೆದುಕೊಳ್ಳುತ್ತೇನೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.ಪರಿಹಾರ ನೀಡಿಲ್ಲ: ಹೆಚ್ಚಿನ ಮಳೆಯಿಂದ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಮನೆಗಳು ಬಿದ್ದುಹೋಗಿವೆ. ಆದರೆ ಇದುವರೆಗೂ ಮನೆಯಗಳಿಗೆ ಪರಿಹಾರ ನೀಡಿಲ್ಲ. ಅಲ್ಲದೆ ಕೇವಲ ಒಂದು ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಒಂದು ಲಕ್ಷದಿಂದ ಬಡವರ ತಮ್ಮ ಮನೆ ಕಟ್ಟಿಕೊಳ್ಳಲು ಸಾಧ್ಯಾನಾ ಎಂದು ಪ್ರಶ್ನೆ ಮಾಡಿದರು. ಪೂರ್ತಿ ಮನೆ ಬಿದ್ದರೇ ೧ ಲಕ್ಷದ ೨೦ ಸಾವಿರವಂತೆ. ಇದರಿಂದ ಅಡಿಪಾಯ ಹಾಕಲು ಸಾಧ್ಯವೇ! ಕನಿಷ್ಠ ೫ ಲಕ್ಷ ಪರಿಹಾರ ನೀಡಿದರೆ ಬಿದ್ದು ಹೋಗಿರುವ ಮನೆ ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮೂರು ಲಕ್ಷ ಪರಿಹಾರ ನೀಡಿದರು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಒಂದು ಲಕ್ಷಕ್ಕೆ ಇಳಿಸಿದೆ ಎಂದು ತಮ್ಮ ಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಬದಲಾಗಿ ಬ್ರಾಂಡಿ ಶಾಪ್‌ಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆ ಬೀದಿ ಬೀದಿಗಳಲ್ಲಿ ಬ್ರಾಂಡಿ ಶಾಪ್ ನಡೆಯುತ್ತಿದ್ದವು. ಆದರೆ ಇದೀಗ ಮನೆ ಮನೆಗಳಲ್ಲಿ ಮದ್ಯದ ಅಂಗಡಿಗಳು ಆಗಿವೆ. ಅಲ್ಲದೆ ಬಡವರು ಕುಡಿಯುವ ಮದ್ಯಕ್ಕೆ ಬೆಲೆ ಜಾಸ್ತಿ ಮಾಡಿ ಶ್ರೀಮಂತರು ಕುಡಿಯುವ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಿದ್ದಾರೆ ಎಂದು ದೂರಿದರು.ಇನ್ನು ಎತ್ತಿನಹೊಳೆ ಯೋಜನ ವಿಚಾರವಾಗಿ ಮಾತನಾಡಿ, ಎತ್ತಿನಹೊಳೆ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಜೊತೆಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಶದಲ್ಲಿದೆ. ಅವರು ತಮ್ಮ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.