ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ: ಸಚಿವ ದರ್ಶನಾಪೂರ

| Published : Sep 06 2025, 01:00 AM IST

ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ: ಸಚಿವ ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ತಾಲೂಕು ಕೇಂದ್ರವಾಗಿರುವ ವಡಗೇರಾ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನೂತನ ತಾಲೂಕು ಕೇಂದ್ರವಾಗಿರುವ ವಡಗೇರಾ ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.

ಕಂದಾಯ ಇಲಾಖೆಯಿಂದ ವಡಗೇರಾ ಪಟ್ಟಣದಲ್ಲಿ 8.60 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಜಾ ಸೌಧ ತಾಲೂಕು ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

1 ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದ್ದು, ಇಲ್ಲಿಯೇ ಹಲವಾರು ಸರ್ಕಾರಿ ಇಲಾಖೆಗಳ ಕಚೇರಿಗಳು ಆರಂಭಗೊಳ್ಳಲಿವೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ನಮ್ಮ ಸರ್ಕಾರ ಈಗಾಗಲೇ ರಾಜ್ಯದಲ್ಲಿ 54 ಪ್ರಜಾಸೌಧ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರು ನೀಡಿದೆ. ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 16 ಪ್ರಜಾಸೌಧ ತಾಲೂಕು ಆಡಳಿತ ಕೇಂದ್ರಗಳು ಮಂಜೂರಾಗಿವೆ, ಜಿಲ್ಲೆಯ ಗುರುಮಠಕಲ್, ಶಹಾಪೂರ, ಹುಣಸಗಿಯಲ್ಲಿ ಕೂಡ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿದ ಸಚಿವರು, ವಡಗೇರಾದಲ್ಲಿ 30 ಬೆಡ್‌ಗಳ ಸರ್ಕಾರಿ ಆಸ್ಪತ್ರೆಯನ್ನು 50 ಬೆಡ್‌ಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟದಲ್ಲಿ 554 ಕೋಟಿ ರುಪಾಯಿಗಳ ವೆಚ್ಚದಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.

ಈಗಾಗಲೇ ಸರ್ಕಾರ 1800 ಕೋಟಿ ರು.ಗಳ ವೆಚ್ಚದಲ್ಲಿ ಜಲಧಾರೆ ಯೋಜನೆ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ, ಸಿಎಂ ತಲಾ ಶಾಸಕರಿಗೆ 50 ಕೋಟಿ ರುಪಾಯಿ ವಿಶೇಷ ಅನುದಾನ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಣಕಾಸು ಖಾತೆ ನಿರ್ವಹಣೆ ಮಾಡುವ ಮೂಲಕ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಹಿಂದುಳಿದಿರುವ ವಡಗೇರಾ ತಾಲೂಕಿನ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ನೀರಾವರಿ ಇಲಾಖೆಯಿಂದ 200 ಕೋಟಿ ರುಪಾಯಿಗಳ ಕಾಮಗಾರಿ ಟೆಂಡರ್ ಕರೆಯಲಾಗುತ್ತಿದೆ. ಬರುವ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ವರ್ಷ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆ ವ್ಯರ್ಥವಾಗಿದೆ ನಾನು ಕೂಡ ಪರಿಹಾರ ಒದಗಿಸಿಕೊಡಲು ಯತ್ನಿಸುತ್ತೇನೆ ಎಂದರು.

ಕರ್ನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಯೋಜನೆ ಮಾಹಿತಿ ನೀಡಿದರು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನ್‌ಸೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ತಹಸೀಲ್ದಾರ ಮಂಗಳಾ ಎಂ, ಗ್ರಾ.ಪಂ. ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ್, ಗೃಹಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗಿರೀಶ್, ಬಸ್ಸುಗೌಡ ಬಿಳ್ಹಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.