ಸಾರಾಂಶ
ದೇವನಹಳ್ಳಿ: ಹಿಂದಿನ ಸರ್ಕಾರ ಮಾಡಬೇಕಾಗಿದ್ದ ಅನೇಕ ಕಾಮಗಾರಿಗಳು ನಮ್ಮ ಸರ್ಕಾರ ತ್ವರಿತಗತಿಯಲ್ಲಿ ಮಾಡಿ ಪೂರ್ಣಗೊಳಿಸುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ತಾಲೂಕಿನ ವಿಜಯಪುರ ಶಿವನ ಸರ್ಕಲ್‌ನಿಂದ ಶಿಡ್ಲಘಟ್ಟ ಕ್ರಾಸ್‌ವರೆಗೆ ಮತ್ತು ಕೆಂಪೇಗೌಡ ಸರ್ಕಲ್‌ನಿಂದ ರಾಣಿ ಕ್ರಾಸ್‌ವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ಇತರ ರಸ್ತೆಗಳ 400 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸ್ಥಳೀಯರ ಅಭಿವೃದ್ಧಿ ಕಾಮಗಾರಿಗಳನ್ನು ನಿಗಾ ವಹಿಸಬೇಕು. ಲೋಪದೋಷಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ನೆರವಾಗಬೇಕು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮುಂದಿನ ಕಾಮಗಾರಿಗಳಿಗೆ ಎರಡು ಹಂತದಲ್ಲಿ 40 ಕೋಟಿ ರು. ಬಿಡುಗಡೆ ಮಾಡುವುದಾಗಿ ಸಚಿವರು ಈ ವೇಳೆ ಭರವಸೆ ನೀಡಿದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರು. ಹಣ ವೆಚ್ಚವಾಗಿದ್ದು ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ತಾಲೂಕಿನ ಎಲ್ಳಾ ರಸ್ತೆಗಳಿಗಾಗಿ 40 ಕೋಟಿ ಅಂದಾಜು ವೆಚ್ಚಕ್ಕೆ ಪ್ರಸ್ತಾವನೆ ಇಟ್ಟಿದ್ದು, ಸಚಿವರು ಹಂತ ಹಂತವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಅಭಿವೃದ್ಧಿಯೇ ಸರ್ಕಾರದ ಮುಖ್ಯ ಉದ್ದೇಶ. ಯಾವುದೇ ಯೋಜನೆಗಳಿಗೆ ಸ್ಥಳೀಯರು, ಅಧಿಕಾರಿಗಳು ಪರಸ್ಪರ ಸಹಕಾರದಿಂದ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ದೇವನಹಳ್ಳಿ ಮತ್ತು ವಿಜಯಪುರ ಎರಡೂ ಪಟ್ಟಣಗಳ ಅಭಿವೃದ್ಧಿ ಮಾಡಲು ಶಂಕುಸ್ಥಾಪನೆ ನೆರವೇರಿಸಿರುವ ಸಚಿವದ್ವಯರಿಗೆ ಅಭಿನಂದನೆ ಸಲ್ಲಿಸಿ, ನಮ್ಮ ಸರ್ಕಾರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಅಭಿವೃದ್ಧಿ ಕುಂಟಿತವಾಗದ ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿದೆ. ಸರ್ಕಾರಿ ಯೋಜನೆಗಳನ್ನು ಜನರಿಗೆ ಸಮಪರ್ಕವಾಗಿ ತಲುಪಿಸುವ ಜವಾಬ್ದಾರಿ ಸ್ಥಳೀಯ ಆಡಳಿತಗಳದ್ದು. ಸ್ಥಳೀಯವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆಯೇ ಎಂದು ನಿಗಾ ವಹಿಸಬೇಕು ಎಂದು ಸಲಹೆ ಮಾಡಿದರು.ಈ ವೇಳೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಬಯಪ ಸದಸ್ಯರಾದ ಪ್ರಸನ್ನಕುಮಾರ್, ರಾಮಚಂದ್ರಪ್ಪ ಮುಖಂಡರಾದ ವಿ. ಮಂಜುನಾಥ್ ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)ದೇವನಹಳ್ಳಿ ಹೊಸಬಸ್ ಹೊಸ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಚಾಲನೆ ನೀಡಿದರು. ಬಯಪ ಅಧ್ಯಕ್ಷ ಶಾಂತಕುಮಾರ್ ಇತರರಿದ್ದರು.