ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮೀನಮೇಷ

| Published : Oct 24 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ೨೦೧೫ರ ನಂತರ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳಿಗಾಗಿ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹೊಸ ನಿಯಮ ಜಾರಿ ಮಾಡಿದೆ. ಆದರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕೇತರ ಸಿಬ್ಬಂದಿಯ ನೇಮಕಾತಿ ಇಲ್ಲ. ಅಲ್ಲದೇ ಗಣಕಯಂತ್ರದ ವ್ಯವಸ್ಥೆಯಿಲ್ಲ. ಆನ್‌ಲೈನ್ ಮಾಡಬೇಕಾದರೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಬೇಕು. ಅದಕ್ಕಾಗಿ ವರ್ಷಗಟ್ಟಲೇ ಸಮಯಬೇಕು.

ಕನ್ನಡಪ್ರಭ ವಾರ್ತೆ ಸಿಂದಗಿ

೨೦೧೫ರ ನಂತರ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳಿಗಾಗಿ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹೊಸ ನಿಯಮ ಜಾರಿ ಮಾಡಿದೆ. ಆದರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕೇತರ ಸಿಬ್ಬಂದಿಯ ನೇಮಕಾತಿ ಇಲ್ಲ. ಅಲ್ಲದೇ ಗಣಕಯಂತ್ರದ ವ್ಯವಸ್ಥೆಯಿಲ್ಲ. ಆನ್‌ಲೈನ್ ಮಾಡಬೇಕಾದರೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಬೇಕು. ಅದಕ್ಕಾಗಿ ವರ್ಷಗಟ್ಟಲೇ ಸಮಯಬೇಕು. ಇದರ ಒಟ್ಟಾರೆ ಉದ್ದೇಶ ಸರ್ಕಾರಿ ಹುದ್ದೆಗಳನ್ನು ಅನುದಾನಕ್ಕೆ ಒಳಪಡಿಸಿ ಆದೇಶ ಹೊರಡಿಸಲು ಕಾಲದೂಡುವ ಉಪಾಯವೇ ಹೊರತು ಬೇರೇನೂ ಇಲ್ಲ ಎಂದು ವಿಪ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸುವ ಕಾಲ ಇದೀಗ ಪಕ್ವವಾಗಿದೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ನಿವೃತ್ತಿ ಅಂಚಿನಲ್ಲಿದ್ದಾರೆ. ಸರ್ಕಾರದ ಯಾವುದೇ ವೇತನ ತೆಗೆದುಕೊಳ್ಳದೇ ನಿವೃತ್ತಿಯಾಗುವುದರಿಂದ ಅವರ ಕೌಟುಂಬಿಕ ಹಾಗೂ ಆರ್ಥಿಕ ಅಭದ್ರತೆಗೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.ಕೆಲವೊಂದು ಶಿಕ್ಷಣ ಸಂಸ್ಥೆಗಳನ್ನು ೧೯೯೫ರ ನಂತರ ಅನುದಾನಕ್ಕೆ ಒಳಪಡಿಸಲು ಹೊರಡಿಸಲಾದ ಸುತ್ತೋಲೆಯಲ್ಲಿ ವಿಧಿಸಿರುವ ಕಟ್ಟುಪಾಡುಗಳು ಶಿಕ್ಷಣ ಸಂಸ್ಥೆಗಳು ಅನುದಾನಕ್ಕೊಳಪಡಲು ಆಗದೇ ಇರುವಷ್ಟು ಕಠಿಣವಾಗಿವೆ. ಅನುದಾನಕ್ಕೆ ಒಳಪಟ್ಟ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕಡತಗಳನ್ನು ಹಣಕಾಸು ವಿಭಾಗದ ಅನುಮೋದನೆ ಪಡೆಯಲು ಕಳುಹಿಸಬೇಕೆಂಬ ಹೊಸ ನಿಯಮ ಜಾರಿ ಮಾಡಿದೆ. ಇದು ಭ್ರಷ್ಟತನಕ್ಕೆ ಮಾರ್ಗ ಮಾಡಿಕೊಡುವುದಲ್ಲದೇ ಹಣಕಾಸು ವಿಭಾಗ ತುಘಲಕ್ ದರ್ಬಾರಿನಂತೆ ವರ್ತಿಸುತ್ತಿದೆ. ಇಲ್ಲಿಂದ ಕಡತಗಳು ಅನುಮೋದನೆಗೊಂಡು ಹೊರಬರಬೇಕಾದರೆ ಅಭ್ಯರ್ಥಿಯು ತನ್ನ ಹೊಲ-ಮನೆ ಮಾರಬೇಕಾಗಬಹುದು ಎಂದು ಟೀಕಿಸಿದರು.

ಜೋಳಿಗೆ ಹಾಕಿ ಸಂಸ್ಥೆ ಕಟ್ಟಿದ ಮಹಾನುಭಾವರು ಸರ್ಕಾರದ ದ್ವಿಮುಖ ನೀತಿಯಿಂದಾಗಿ ಮುಚ್ಚುವ ಸ್ಥಿತಿಗೆ ಬಂದಿದ್ದು, ಅಭ್ಯರ್ಥಿಗಳ ಸ್ಥಿತಿ ಮುಳ್ಳಿನ ಮೇಲೆ ನಡೆದಂತಿದೆ. ಒಟ್ಟಾರೆ ಸರ್ಕಾರ ಶಿಕ್ಷಕರ ರಕ್ಷಣೆ ಮಾಡಲು ಕಾರ್ಯಪ್ರವೃತ್ತವಾಗಬೇಕು. ಇಲ್ಲದಿದ್ದರೆ ಶಿಕ್ಷಣ ವ್ಯವಸ್ಥೆಯೇ ಹದಗೆಡುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

೩೦ ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನವಿಲ್ಲದೇ ನಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದು ಕಷ್ಟಕರ. ಸಂವಿಧಾನದ ಪ್ರಕಾರ ೮ನೇ ತರಗತಿಯವರೆಗೆ ಉಚಿತ ಕಡ್ಡಾಯ ಶಿಕ್ಷಣ ಕೊಡಬೇಕಿದೆ. ಈ ಆಶಯ ಈಡೇರಿಸುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಂಹಪಾಲು ಇದೆ. ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಿರತರಾದ ಶಿಕ್ಷಕರ ಬೇಡಿಕೆಗಳಿಗೆ ಕ್ಯಾರೇ ಎನ್ನದ ಸರ್ಕಾರದ ನಿಲುವು ಖಂಡನೀಯ ಎಂದರು.

ಈ ವೇಳೆ ಭೀಮಾಶಂಕರ ತಾರಾಪೂರ, ಸಿದ್ದನಗೌಡ ಪಾಟೀಲ ಕನ್ನೋಳ್ಳಿ, ಶಿವಾನಂದ ರೋಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಜಗದೀಶ ಪಾಟೀಲ ಇತರರು ಇದ್ದರು.