ಮಳವಳ್ಳಿ ತಾಲೂಕಿನ 16 ಗ್ರಾಮಗಳಲ್ಲಿ ಶಿಶು ಮರಣ, ಶಿಶುವಿನ ಆರೈಕೆ, ಬಾಣಂತಿಯರ ಪೌಷ್ಟಿಕ ಆಹಾರ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನುಕುಲ ಸಂರಕ್ಷಣೆ ಮಹತ್ವವನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಜನರ ಸಹಭಾಗಿತ್ವದಲ್ಲಿ ಆರೋಗ್ಯ ಅರಿವು ಮೂಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಹಿಳೆಯರ ಆರೋಗ್ಯದ ಕಡೆ ಹೆಚ್ಚಿನ ಆಸಕ್ತಿ ವಹಿಸಲು ಸರ್ಕಾರ ಮುಂದಾಗಿದೆ. ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘದ, ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಜಾಗೃತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ 16 ಗ್ರಾಮಗಳಲ್ಲಿ ಶಿಶು ಮರಣ, ಶಿಶುವಿನ ಆರೈಕೆ, ಬಾಣಂತಿಯರ ಪೌಷ್ಟಿಕ ಆಹಾರ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನುಕುಲ ಸಂರಕ್ಷಣೆ ಮಹತ್ವವನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಜನರ ಸಹಭಾಗಿತ್ವದಲ್ಲಿ ಆರೋಗ್ಯ ಅರಿವು ಮೂಡಿಸಲಾಗುತ್ತಿದೆ. ಇದರ ಸದುಪಯೋಗವನ್ನು ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ವಿವಿಧ ಕಲಾ ಪ್ರಕಾರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆಡು ಭಾಷೆಯಲ್ಲಿ ಜನರೆದುರು ರೂಪಕವನ್ನು ಸಾಧರಪಡಿಸುವ ಮೂಲಕ ತಮ್ಮ ಕುಟುಂಬದ ಪ್ರತಿ ಪ್ರಜೆಯೂ ಆರೋಗ್ಯವಾಗಿರಬೇಕೆಂಬ ಆಶಯವನ್ನು ಇಟ್ಟುಕೊಂಡು ಇದನ್ನು ಸಂಘಟಿಸಲಾಗುತ್ತಿದೆ ಎಂದರು.

ಆರೋಗ್ಯ ಕರ್ನಾಟಕ, ಗರ್ಭಿಣಿಯರ ಆರೈಕೆ, ಆಸ್ಪತ್ರೆಯ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮ, ವೈಯಕ್ತಿಕ ಸ್ವಚ್ಛತೆ, ಕುಟುಂಬ ಕಲ್ಯಾಣ ವಿಧಾನಗಳು, ಹೆಣ್ಣು ಮಗುವನ್ನು ಸಂರಕ್ಷಿಸಿ ಈ ರೀತಿಯ ರೂಪಕಗಳನ್ನು ಸಾಧರಪಡಿಸಲಾಗುತ್ತದೆ ಎಂದರು.

ಈ ವೇಳೆ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್, ಮಕ್ಕಳ ತಜ್ಞ ಡಾ.ಶಿವಸ್ವಾಮಿ, ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ, ಬಿಎಚ್‌ ಇಒ ಮಂಜುನಾಥ್, ನಂದೀಶ್, ಶಿವಗಂಗಾ ಸಾಂಸ್ಕೃತಿಕ ಸಂಘದ ಮುಖ್ಯಸ್ಥ ಬಸವರಾಜ್ ಸಂತೆಕಸಲಗೆರೆ, ಕಲಾವಿದರಾದ ಎಸ್.ರಾಜಣ್ಣ, ದೇವರಾಜು, ಮಹದೇವ, ಶಿವರಾಜು, ನವೀನಕುಮಾರಿ ಇತರರು ಉಪಸ್ಥಿತರಿದ್ದರು.