ದೌರ್ಜನ್ಯದಡಿ ಕೊಲೆಯಾದ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

| Published : Oct 06 2024, 01:24 AM IST

ದೌರ್ಜನ್ಯದಡಿ ಕೊಲೆಯಾದ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದೌರ್ಜನ್ಯ ಪ್ರಕರಣದಡಿ ಈ ವರ್ಷ ಒಟ್ಟು 60 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯದ ಪ್ರಕರಣಗಳಾಗಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೌರ್ಜನ್ಯದಡಿ ಕೊಲೆಯಾದ ಕುಟುಂಬದ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 3ನೇ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,

ಈ ವರ್ಷ ಫೆ.2ರಂದು ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿ ಗಾಂಧಿನಗರದ ಡಾಕ್ಯಾನಾಯ್ಕ್ ಬಿನ್ ರಾಮಾನಾಯ್ಕ್ ಮತ್ತು ಏ.4ರಂದು ಹೊನ್ನಾಳಿಯ ಮಂಜಪ್ಪ ಬಿನ್ ಬಸಪ್ಪ ಹಾಗೂ ಸೆ.18ರಂದು ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಶಿವರಾಜ್ ಬಿನ್ ತೀರ್ಥಪ್ಪ ಇವರು ದೌರ್ಜನ್ಯದಡಿ ಕೊಲೆಯಾಗಿದ್ದು ಸರ್ಕಾರದ ಆದೇಶದಂತೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಡಾಕ್ಯಾನಾಯ್ಕ್ ಇವರ ಕುಟುಂಬದವರ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಉಳಿದ ಇಬ್ಬರಿಂದ ದಾಖಲೆ ಪಡೆದು ಸರ್ಕಾರಕ್ಕೆ ಕಳುಹಿಸಲು ಇವರ ಸಹಾಯಕ್ಕಾಗಿ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದ್ದು ಆದಷ್ಟು ಬೇಗ ಇವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ನೆರವು ನೀಡಲಾಗುತ್ತದೆ. ಇತ್ತೀಚೆಗೆ ಕೊಲೆಯಾದ ಮಾರಿಗೊಂಡನಹಳ್ಳಿ ಶಿವರಾಜ್ ಮನೆಗೆ ಭೇಟಿ ನೀಡಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಇವರಿಗೆ ಆದಷ್ಟು ಬೇಗ ಸರ್ಕಾರದ ಸವಲತ್ತನ್ನು ತಲುಪಸಿಬೇಕಾಗಿದೆ ಎಂದರು.

ದೌರ್ಜನ್ಯ ಪ್ರಕರಣದಡಿ ಈ ವರ್ಷ ಒಟ್ಟು 60 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯದ ಪ್ರಕರಣಗಳಾಗಿವೆ. ಇದರಲ್ಲಿ 28ಕ್ಕೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿವೆ. ಎಫ್‌ಐಆರ್ ಹಂತದಲ್ಲಿ ₹38.70 ಲಕ್ಷ ಮತ್ತು ಚಾರ್ಜ ಶೀಟ್ ಹಂತದಲ್ಲಿ ₹79.88 ಲಕ್ಷ ಸೇರಿ ₹1.18 ಕೋಟಿ ಪರಿಹಾರ ನೀಡಿದ್ದು 66 ಪರಿಶಿಷ್ಟ ಜಾತಿ, 56 ಪರಿಶಿಷ್ಟ ಪಂಗಡರವರು ಸೇರಿ 122 ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿದೆ.

ದೌರ್ಜನ್ಯ ತಡೆ ಕಾಯ್ದೆಯಡಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 2024 ಜುಲೈನಲ್ಲಿ 144, ಆಗಸ್ಟ್ ನಲ್ಲಿ 147, ಸೆಪ್ಟೆಂಬರ್‌ನಲ್ಲಿ 145 ಪ್ರಕರಣಗಳಿದ್ದು ಈ ಮೂರು ತಿಂಗಳ ಅವಧಿಯಲ್ಲಿ 10 ಪ್ರಕರಣಗಳು ವಿಲೇಯಾಗಿವೆ. ಪ್ರಸ್ತುತ ಸೆಪ್ಟೆಂಬರ್ ಅಂತ್ಯಕ್ಕೆ 143 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು ಇದರಲ್ಲಿ 2018 ರ 1, 2019 ರ 3, 2020 ರ 20, 2021 ರಲ್ಲಿನ 14, 2022 ರ ಅವಧಿಯ 32, 2023 ರಲ್ಲಿನ 49 ಮತ್ತು 2024 ರಲ್ಲಿನ 34 ಪ್ರಕರಣಗಳಿವೆ. ಚಾರ್ಜ್ ಶೀಟ್ ಹಾಕದಿರುವ ಪ್ರಕರಣಗಳಲ್ಲಿ ಕೂಡಲೇ ಚಾರ್ಜ ಶೀಟ್ ಹಾಕಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.