ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಅತಿ ಶೀಘ್ರದಲ್ಲಿಯೇ ಸರ್ಕಾರಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸ್ವಲ್ಪ ತಡವಾಗಿದೆ. ಸರ್ಕಾರ ಸಂತ್ರಸ್ತರಿಗೆ ಏನೂ ಮಾಡಿಲ್ಲ ಎಂಬ ವಾದ ಸರಿಯಲ್ಲ. ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲಾಗಿದೆ. ಕಾಯಂ ನೌಕರಿ ಕೊಡಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಕ್ಯಾಬಿನೆಟ್ ಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಾನೂನು ತೊಡಕುಗಳಿದ್ದು ಕಾನೂನು ಇಲಾಖೆಯ ಅನುಮತಿ ದೊರೆತ ನಂತರ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಕೆಲಸ ಕೊಡಿಸಲಾಗುವುದು, ಇದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಆಕ್ಸಿಜನ್ ದುರಂತದಲ್ಲಿ 36 ಮಂದಿ ಮೃತಪಟ್ಟರು. ಆದರೆ, ಅಂದಿನ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿದರು. ಆದರೆ, ಆ ವೇಳೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಿಲ್ಲಾಸ್ಪತ್ರೆಗೆ ಬಂದು ಪರಿಶೀಲಿಸಿದ ಬಳಿಕ 36 ಮಂದಿ ಮೃತಪಟ್ಟಿರುವುದು ಗೊತ್ತಾಗಿತ್ತು. ಈ ಸಂಬಂಧ ಸದನದಲ್ಲಿಯೂ ಪ್ರಸ್ತಾಪ ಮಾಡಿದ ಮೇಲೆ ಮುನ್ನಲೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸಚಿವರು ಕ್ರಮವಹಿಸಲಿದ್ದಾರೆ ಎಂದರು.ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಆಕ್ಸಿಜನ್ ದುರಂತ ನಡೆದು 4 ವರ್ಷವೇ ಕಳೆದು ಹೋಗಿದೆ. ಘಟನೆ ನಡೆದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನಮ್ಮ ಸರ್ಕಾರ ಬಂದರೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯ ತನಕ ಭರವಸೆ ಈಡೇರಿಲ್ಲ. ಈ ಸಂಬಂಧ ಹಲವು ಹೋರಾಟಗಳು ನಡೆದಿವೆ. ಕೂಡಲೇ ಸಂತ್ರಸ್ತರಿಗೆ ಸರ್ಕಾರಿ ಕೆಲಸ ಹಾಗೂ ₹25 ಲಕ್ಷ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಟರ್, ನಗರಸಭಾ ಸದಸ್ಯರಾದ ಅಬ್ರಾರ್ ಅಹಮ್ಮದ್, ಮಹೇಶ್, ಖಲೀಲ್ ಉಲ್ಲಾ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ವಿವಿಧ ಸಂಘಟನೆಗಳ ಮುಖಂಡರಾದ ಕೆ.ವೆಂಕಟರಾಜು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಡಾ.ಗುರುಪ್ರಸಾದ್, ಪುಣಜನೂರು ದೊರೆಸ್ವಾಮಿ, ಅರಕಲವಾಡಿ ನಾಗೇಂದ್ರ, ನಿಜಧ್ವನಿ ಗೋವಿಂದರಾಜು, ಸುರೇಶ್ ವಾಜಪೇಯಿ ಹಾಜರಿದ್ದರು.