ತಹಸೀಲ್ದಾರ್, ಆರ್‌ಐ ವಿರುದ್ಧ ಲೋಕಾಯುಕ್ತರಿಗೆ ಮಾಜಿ ಶಾಸಕ ಮಂಜುನಾಥಗೌಡ ನೇತೃತ್ವದಲ್ಲಿ ದೂರು

ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ತಾಲೂಕು ತೊರ್ನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಸುಮಾರು ೮೦ ಕೋಟಿ ರು. ಸರ್ಕಾರಕ್ಕೆ ನಷ್ಟ ಉಂಟು ಮಾಡಲು ಕಾರಣರಾಗಿರುವ ಅಲ್ಲಿನ ತಹಸೀಲ್ದಾರ್ ರೂಪ, ಕಂದಾಯ ನಿರೀಕ್ಷಕ ಬಿ.ವಿ. ಅರುಣ್‌ಕುಮಾರ್, ವಿಎ ದೀಪಕ್ ಮತ್ತು ಕಚೇರಿ ವಿಷಯ ನಿರ್ವಾಹಕಿ ಚಿತ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ನೇತೃತ್ವದಲ್ಲಿ ಎಂ. ಬಾಬು ಎಂಬುವರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದರು.ತೊರ್ನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಾದ ಸ.ನಂ.೨೭೭/೩, ೨೭೭/೪, ೨೮೦, ೨೮೨/೧, ೨೮೨/೩, ೨೮೩/೨, ೨೮೩/೪, ೨೮೪/೧, ೨೮೪/೭, ೨೮೫/೧, ೨೮೫/೩ ಸರ್ಕಾರಿ ಜಮೀನುಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ದಾಖಲೆಗಳೊಂದಿಗೆ ಲೋಕಾಯುಕ್ತ ಅಧೀಕ್ಷಕರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.ಸದರಿ ನಕಲಿ ದಾಖಲೆಗಳ ಸೃಷ್ಟಿಗೆ ಮಾಲೂರು ತಹಸೀಲ್ದಾರ್ ರೂಪ ಅವರು, ಎಂ.ಆರ್.ನಂ.ಊ.೩೬/೨೦೨೪-೨೫ ರಂತೆ ಮುನಿಶಾಮಪ್ಪ ಬಿನ್ ಚಿಕ್ಕಬಸಪ್ಪ ಅವರಿಗೆ ಅಕ್ರಮವಾಗಿ ಖಾತೆ ಮಾಡಿರುತ್ತಾರೆ. ಈ ಅಕ್ರಮ ಖಾತೆಯನ್ನು ಮಾಡಲು ಕಂದಾಯ ನಿರೀಕ್ಷಕ ಬಿ.ವಿ. ಅರುಣ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿ ದೀಪಕ್ ಮತ್ತು ಕಚೇರಿ ವಿಷಯನಿರ್ವಾಹಕ ಚಿತ್ರ ಅವರು ಸೃಷ್ಟಿತ ದಾಖಲೆಗಳು ನೈಜವಾಗಿರುತ್ತದೆ ಎಂದು ವರದಿ ನೀಡಿ ತಪ್ಪೆಸಗುವ ಮೂಲಕ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ ಎಂದು ದೂರಿದರು.ಮೇಲ್ಕಂಡ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ೧೯೮೨ ರಿಂದ ೧೯೮೫ ರವರೆಗೂ ಆದಂತಹ ನಡವಳಿಗಳ ಪ್ರಕಾರ ತಹಸೀಲ್ದಾರ್ ಮಾಲೂರು ರವರ ನಂ.ಎಲ್‌ಎನ್‌ಡಿ:೯೩/೮೨-೮೩, ದಿನಾಂಕ:೩೦-೦೯-೧೯೮೨ ರವರ ಆದೇಶದಂತೆ ಈ ಹಿಂದೆ ಕೆಲವರಿಗೆ ಮಂಜೂರಿಯಾಗಿದ್ದು, ಈ ಮಂಜೂರಿಗೆ ಸಂಬಂಧಿಸಿ ಕೆಳಕಂಡ ನ್ಯಾಯಾಲಯಗಳಲ್ಲಿ ಮೇಲ್ಮನವಿ (ಹಾಲಿ ಈಗ ದಾಖಲೆಗಳನ್ನು ತಮ್ಮ ಹೆಸರಿಗೆ ಸೃಷ್ಟಿಸಿಕೊಂಡಿರುವ ಮುನಿಶಾಮಪ್ಪ ಬಿನ್ ಚಿಕ್ಕಬಸಪ್ಪ ಹಾಗೂ ವೆಂಕಟರವಣಪ್ಪ ರವರ ವಾರಸುದಾರರು) ದಾಖಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ನ್ಯಾಯಾಲಯಗಳಲ್ಲಿ ಆದೇಶವಾಗಿರುವುದು ಗೊತ್ತಿದ್ದರೂ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿದ್ದಾರೆ ಎಂದು ನ್ಯಾಯಾಲಯದ ಆದೇಶಗಳೊಂದಿಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ನ್ಯಾಯಾಲಯಗಳ ಆದೇಶದ ಪ್ರತಿಯನ್ನೂ ಈ ಪತ್ರದೊಂದಿಗೆ ಲಗತ್ತಿಸಿದ್ದು, ಸದರಿ ಆದೇಶಗಳನ್ನು ಧಿಕ್ಕರಿಸಿ ಸರ್ಕಾರಿ ಜಮೀನಿಗೆ ಬೋಗಸ್ ದಾಖಲೆ ಸೃಷ್ಟಿಸಿ ಅನುಮೋದನೆ ಮಾಡಿ ಸುಮಾರು ೮೦ ಕೋಟಿ ಬೆಲೆ ಬಾಳುವ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಅಧಿಕಾರಿಗಳು, ನೌಕರರ ಹಾಗೂ ಖಾಸಗಿ ವ್ಯಕ್ತಿಗಳು/ಫಲಾನುಭವಿಗಳು) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಮಂಜುನಾಥಗೌಡರೊಂದಿಗೆ ದೂರುದಾರ ಅಧಿಕಾರ ಹಟ್ಟಿ ಬಾಬು, ಬನಹಳ್ಳಿ ಮುನಿಸ್ವಾಮಿ ಗೌಡ, ವಕೀಲರಾದ ಕೃಷ್ಣಪ್ಪ, ರಾಜ್ ಕುಮಾರ್, ಮುಖಂಡರಾದ ಓಬಳಾಪುರ ಶಂಕರ್, ಗೇರಪುರ ನಾಗರಾಜ್, ತೊರ್ನಹಳ್ಳಿ ಮಂಜುನಾಥ್, ಶ್ರೀನಿವಾಸ್ ಮತ್ತಿತರರಿದ್ದರು.