ನರಸಿಂಹರಾಜಪುರ ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂದು ಅಧಿಕಾರಿಗಳೇ ನಿಮ್ಮ ಗ್ರಾಮಕ್ಕೆ ಬಂದು ಸಮಸ್ಯೆ ಪರಿಹರಿಸಲು ಪ್ರಜಾ ಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶೆಟ್ಟಿಕೊಪ್ಪದಲ್ಲಿ ಗ್ರಾಪಂ ಮಟ್ಟದ ಪ್ರಜಾ ಸೇವೆ ಕಾರ್ಯಕ್ರಮ। ಕುಡಿಯುವ ನೀರು, ರಸ್ತೆ ರಿಪೇರಿ, ಹಕ್ಕು ಪತ್ರ ಸೇರಿ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಅಹವಾಲು
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂದು ಅಧಿಕಾರಿಗಳೇ ನಿಮ್ಮ ಗ್ರಾಮಕ್ಕೆ ಬಂದು ಸಮಸ್ಯೆ ಪರಿಹರಿಸಲು ಪ್ರಜಾ ಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶನಿವಾರ ಶೆಟ್ಟಿಕೊಪ್ಪದ ವಿದ್ಯಾ ಗಣಪತಿ ಪೆಂಡಾಲ್ ನಡೆದ ಕಡಹಿನಬೈಲು ಗ್ರಾಪಂ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಸ್ಯೆ ಬಗೆಹರಿಸಲು ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸುತ್ತೇವೆ. ಇಲ್ಲಿ ಆಗದಿದ್ದರೆ ತಾಲೂಕು ಕಚೇರಿ, ಜಿಲ್ಲಾ ಕಚೇರಿ ಅಥವಾ ರಾಜ್ಯ ಮಟ್ಟದಲ್ಲಿ ಪರಿಹಾರ ಮಾಡುತ್ತೇವೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ನೀಡುತ್ತಿದ್ದು ಪ್ರತಿ ಕುಟುಂಬದವರಿಗೂ ಗ್ಯಾರಂಟಿ ಪ್ರಯೋಜನ ವಾಗುತ್ತಿದೆ. ಪಂಚಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ತುಂಗಾ ನದಿಯಿಂದ ನೀರು ತರುವ ಯೋಜನೆಗೆ ವಿಶ್ವೇಶ್ವರಯ್ಯ ಜಲ ನಿಗಮದಿಂದ ₹40 ಕೋಟಿ ಮಂಜೂರಾಗಿದೆ. ಕೆಲವೇ ತಿಂಗಳಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಕೊಪ್ಪ, ನರಸಿಂಹರಾಜಪುರ -ಶಿವಮೊಗ್ಗ ರಸ್ತೆಗೆ ₹19 ಕೋಟಿ ಮಂಜೂರಾಗಿದೆ. ನಿನ್ನೆಯಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿದೆ ಎಂದರು.ಈ ವರ್ಷ ಬರಗಾಲವಿರುವುದರಿಂದ ಕುಡಿವನೀರಿನ ಸಮಸ್ಯೆ ಎದುರಾಗಬಹುದು. ಸಂಬಂಧಪಟ್ಟ ಅಧಿಕಾರಿಗಳು ಗಮನಿ ಸಬೇಕು. ಯಾವ ಭಾಗದಲ್ಲೂ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಸ್ಪಂದಿಸಬೇಕು. ಮುತ್ತಿನಕೊಪ್ಪ ಗ್ರಾಪಂನ ಆಲ್ದರ,ಬೈರಾಪುರ, ಮರಾಠಿ ಕ್ಯಾಂಪಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.ಜೂ.14 ರಂದು ಈ ಬಗ್ಗೆ ಸಭೆ ಕರೆದು ಚರ್ಚೆ ನಡೆಸಲಾಗಿತ್ತು. 3-4 ತಿಂಗಳು ಕಳೆದಿದೆ.ಯಾವ ಕ್ರಮ ತೆಗೆದು ಕೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.ಕುಡಿಯುವ ನೀರಿನ ಯೋಜನೆ ಎಂಜಿನಿಯರ್ ಸುನೀಲ್ ಮಾಹಿತಿ ನೀಡಿ ಬೈರಾಪರ, ಆಲ್ದರ ಭಾಗದಲ್ಲಿ ಬೋರ್ ವೆಲ್ ವಿಫಲವಾಗುತ್ತಿದ್ದು ನೀರು ಬರುತ್ತಿಲ್ಲ. ಭದ್ರಾ ನದಿಯಿಂದ ಪೈಪ್ ಲೈನ್ ಮೂಲಕ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುತ್ತಿದ್ದೇವೆ. ಸದ್ಯಕ್ಕೆ ಮುಂದಿನ 10 ದಿನಗಳಲ್ಲಿ ಕುಡಿಯುವ ನೀರು ಒದಗಿಸಲಿದ್ದೇವೆ. ಮಂಗಳವಾರ ಆ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆ ಕರೆದಿದ್ದೇವೆ ಎಂದರು.
ವೇದಿಕೆಯಲ್ಲಿ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ನಿರ್ದೇಶಕ ಪಿ.ಆರ್.ಸದಾಶಿವ, ಬಾಲ ವಿಕಾಸ ಅಕಾಡೆಮಿ ನಿರ್ದೇಶಕ ಶ್ರೀಜಿತ್ ಗೌಡ, ತಾಪಂ ಇ.ಓ.ನವೀನ್ ಕುಮಾರ್, ಗ್ರೇಡ್ - 2 ತಹಸೀಲ್ದಾರ್ ಸುಜಾತ ಇದ್ದರು.-- ಬಾಕ್ಸ್ --
ಸಚಿವ ಸಂಪುಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ವಿವೇಚನ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಶೆಟ್ಟಿಕೊಪ್ಪದಲ್ಲಿ ಹೊಸ ಟ್ಯಾಂಕ್ ಕಟ್ಟಲು ₹19 ಲಕ್ಷ ಮಂಜೂರು ಮಾಡಿಸುತ್ತೇನೆ ಎಂಬ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು ತಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡಿದರು. ಇದೇ ಸಭೆಯಲ್ಲಿ ಪಿ.ಆರ್.ಸದಾಶಿವ, ಶ್ರೀಜಿತ್ ಗೌಡ, ವಾಣಿ ನರೇಂದ್ರ, ಗೇರ್ ಬೈಲು ನಟರಾಜ ಅವರನ್ನು ಅಭಿನಂದಿಸಲಾಯಿತು.--- ಬಾಕ್ಸ್ ---
ಗ್ರಾಮಗಳ ಸಮಸ್ಯೆ ಬಗೆಹರಿಸಲು ಮನವಿಶೆಟ್ಟಿಕೊಪ್ಪದಲ್ಲಿರುವ 350 ಮನೆಗಳಿಗೆ ನೀರು ಪೂರೈಕೆಗೆ 35 ವರ್ಷ ಹಿಂದೆ ಕಟ್ಟಿದ ಟ್ಯಾಂಕ್ ಅವಲಂಬಿಸಿದ್ದು ಇದರ ನೀರು ಲೀಕ್ ಆಗುತ್ತಿದೆ. ಹಾಗಾಗಿ 2 ದಿನಕ್ಕೊಮ್ಮೆ ನೀರು ಬಿಡುವ ಪರಿಸ್ಥಿತಿ ಇದೆ. ಜೆಜೆಎಂ ನಲ್ಲಿ ₹94 ಲಕ್ಷ ಕುಡಿಯುವ ನೀರಿನ ಯೋಜನೆ ಮಾಡಿದ್ದರೂ ನೀರಿನ ಶೇಖರಣೆಗೆ ಟ್ಯಾಂಕ್ ಸರಿ ಇಲ್ಲದೆ ಸಮರ್ಪಕ ನೀರು ಬರುತ್ತಿಲ್ಲ ಎಂದು ಕಡಹಿನ ಬೈಲು ಗ್ರಾಪಂ ಮಾಜಿ ಅಧ್ಯಕ್ಷ ಎ.ಬಿ.ಮಂಜುನಾಥ್ ಹೇಳಿದರು.
ಹಿಂದಿನ ಸರ್ಕಾರದಲ್ಲಿ ಗ್ರಾಮೀಣ ಭಾಗದವರಿಗೆ ಮಂಜೂರಾಗಿದ್ದ 2 ಗುಂಟೆ ಜಾಗಕ್ಕೆ ಪಹಣಿ ಆಗಲಿಲ್ಲ. ಹಕ್ಕು ಪತ್ರ ಮಾತ್ರ ನೀಡಿದ್ದಾರೆ ಸಮಸ್ಯೆ ಬಗೆಹರಿಸಿ ಎಂದು ಶೆಟ್ಟಿ ಕೊಪ್ಪ ಮಹೇಶ್ ಹಾಗೂ ಮಂಜುನಾಥ್ ತಿಳಿಸಿದರು.ಗ್ರಾಪಂ ಮಾಜಿ ಅಧ್ಯಕ್ಷೆ ಲಿಲ್ಲಿ ಮಾಥು ಕುಟ್ಟಿ ಮಾತನಾಡಿ ಸೂಸಲವಾನಿ ಭಾಗದಲ್ಲಿ ಜಲಜೀವನ್ ಯೋಜನೆಯಡಿ ಹಾಕಿರುವ ಪೈಪ್ ಲೈನ್ ಹಾಳಾಗಿದೆ. ವರ್ಷಗಳೇ ಕಳೆದರೂ ನೀರು ಬಂದಿಲ್ಲ, ನಲ್ಲಿ ಮಾತ್ರ ಇದೆ ಎಂದು ದೂರಿದರು.
ಜಲಜೀವನ್ ಯೋಜನೆಗೆ ಪ್ರತಿ ಮನೆ ಸರ್ವೆ ಮಾಡಲಾಗಿತ್ತು. ಆದರೆ,15 ಮನೆಯ ಸರ್ವೆ ಬಿಟ್ಟಿದ್ದಾರೆ. ನೇರ್ಲೆಕೊಪ್ಪ, ಆಲಂದೂರು, ಮಳಲಿಯಲ್ಲಿ ಹಲವು ಮನೆ ಬಿಟ್ಟು ಹೋಗಿದೆ. ನೀರಿನ ಮೂಲ ನೋಡದೆ ಪೈಪ್ ಲೈನ್, ಟ್ಯಾಂಕ್ ಮಾಡಿ ದ್ದಾರೆ ಕೆಲವು ಭಾಗದಲ್ಲಿ 15 ಮನೆ ಇದ್ದಲ್ಲಿ 25 ಸಾವಿರ ಲೀ. ನೀರು ಸಂಗ್ರಹಣೆ ಟ್ಯಾಂಕ್ ಮಾಡಿದ್ದಾರೆ ಎಂದು ಗಾಂಧಿಗ್ರಾಮ ನಾಗರಾಜ್ ಆರೋಪಿಸಿದರು.ನಮ್ಮ ಊರಿನ ರಸ್ತೆಗೆ ಮೋರಿ ಆಗಿಲ್ಲ. ಮಳೆಗಾಲದಲ್ಲಿ ನೀರು ತಂಬುತ್ತದೆ, ರಸ್ತೆ ಕಾಣುವುದಿಲ್ಲ. ರಸ್ತೆ ದುರಸ್ಥಿ ಮಾಡಿಸಿ ಕೊಡಿ ಎಂದು ಆಲಂದೂರು ಸತೀಶ್ ಒತ್ತಾಯಿಸಿದರು. ನೇರ್ಲೆ ಕೊಪ್ಪ, ದಿಡಿಗಿ ಸೇತುವೆಗೆ ಕೈಪಿಡಿ ಇಲ್ಲ. ಗಾಂಧಿ ಗ್ರಾಮಕ್ಕೆ ಬರುವ ರಸ್ತೆಗಳು ತುಂಬಾ ಹಾಳಾಗಿದ್ದು ಆಟೋ ದವರು ಸಹ ಬರುತ್ತಿಲ್ಲ. ಸೇತುವೆಗೆ ಕೈಪಿಡಿ ಮಾಡಿಕೊಡಿ ಎಂದು ಕೆಲವು ಗ್ರಾಮಸ್ಥರು ಒತ್ತಾಯಿಸಿದರು.