ಹೂವಿನಹಡಗಲಿ: ಸಾಮಾಜಿಕ ಭದ್ರತಾ ಯೋಜನೆಯಡಿ ಮಾಶಾಸನ ನೀಡಲು ಆದಾಯ ಮಿತಿ ಹೇರಿದ ಸರ್ಕಾರದ ನಿರ್ಧಾರದಿಂದ ಅಂಗವಿಕಲರನ್ನು ಒತ್ತಾಯಪೂರ್ವಕವಾಗಿ ಬೀದಿಗೆ ತಳ್ಳಿ ಭಿಕ್ಷೆ ಬೇಡುವಂತೆ ಮಾಡಿದೆ. ಕೂಡಲೇ ಆದಾಯ ಮಿತಿ ರದ್ದು ಮಾಡಬೇಕೆಂದು ರಾಜ್ಯ ಅಂಗವಿಕಲರ ಪಾಲಕರ ಸಂಚಾಲಕ ರಂಗಪ್ಪ ದಾಸರ್ ಒತ್ತಾಯಿಸಿದ್ದಾರೆ.
ಇಲ್ಲಿನ ತಾಲೂಕು ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಸಹಯೋಗದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಮಾತನಾಡಿದರು.ಇತ್ತೀಚಿಗೆ ಸರ್ಕಾರದ ಆದೇಶದ ಅನ್ವಯ ಹಲವು ಕಾರಣಗಳಿಂದಾಗಿ ವಿಕಲಚೇತನರು, ಹಿರಿಯ ನಾಗರಿಕರು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ತಾಲೂಕಿನ 5490 ಫಲಾನುಭವಿಗಳ ಮಾಶಾಸನವನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಕೂಡಲೇ ಸರ್ಕಾರ ಅಂಗವಿಕಲರಿಗೆ ಉದ್ಯೋಗ ನೀಡಬೇಕು, ಇಲ್ಲವೇ ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.
ಅಂಗವಿಕಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಚಂದ್ರಪ್ಪ ಮಾತನಾಡಿ, ಈಗಾಗಲೇ 4 ತಿಂಗಳುಗಳಿಂದ ರದ್ದುಪಡಿಸಲಾದ ಅಂಗವಿಕಲ, ವೃದ್ಧಾಪ್ಯ ವೇತನ ಸೇರಿದಂತೆ ಎಲ್ಲ ವೇತನಗಳನ್ನು ಅರ್ಹತಾ ಮಾನದಂಡದ ಆಧಾರದಲ್ಲಿ ಮರು ಚಾಲನೆಗೊಳಿಸಬೇಕು. ಇಲ್ಲ ಸಲ್ಲದ ನೆಪಗಳನ್ನು ಹೇಳಿ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಬಿಡಬೇಕೆಂದು ಹೇಳಿದರು.ನಗರ ಹಾಗೂ ಗ್ರಾಮೀಣ ಮಟ್ಟದ ವಿಕಲಚೇತನರಿಗೆ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಯ ವಿಕಲಚೇತನರ ಶೇ.5ರಷ್ಟು ಅನುದಾನವನ್ನು ಸದ್ಬಳಕೆ ಮಾಡಬೇಕಿದೆ. ಪಟ್ಟಣದಲ್ಲಿ ಸರ್ಕಾರದ ನಿವೇಶನದಲ್ಲಿ ನಿವೇಶನ ನೀಡಿ, ವಿಕಲಚೇತನ ಭವನ ನಿರ್ಮಾಣಕ್ಕಾಗಿ ನಿವೇಶನವನ್ನು ವಿತರಿಸಿ ಗ್ರಾಮ ಪಂಚಾಯಿತಿ ಪುರಸಭೆಯ ಅನುದಾನದಲ್ಲಿ, ವಿಕಲಚೇತನ ಭವನ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಲೆ ವಿಭಾಗದಲ್ಲಿ ಸ್ಪರ್ಧಿಸಿದ ವಿಕಲಚೇತನ ಯುವಕ, ಯುವತಿಯರಿಗೆ ಶೇ.5ರ ಅನುದಾನದಲ್ಲಿ ಪ್ರೋತ್ಸಾಹ ಧನ ನೀಡಬೇಕು. ಇಂತಹ ದುಬಾರಿ ದುನಿಯಾದಲ್ಲಿ ಜೀವನ ನಡೆಸಲು ಕಷ್ಟ ಪಡುತ್ತಿರುವ, ವಿಕಲಚೇತನರ ಮಾಸಾಶನವನ್ನು 3 ಸಾವಿರದಿಂದ 5 ಸಾವಿರ ರುಗಳಿಗೆ ಹೆಚ್ಚಿಸಿ ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಿಂಗಪ್ಪ ಜಾಡರ್, ನಗರ ಘಟಕದ ಅಧ್ಯಕ್ಷ ಎನ್.ಎಂ.ಕೊಟ್ರೇಶ, ಉಪಾಧ್ಯಕ್ಷ ದಾದಾ ಖಲಂದರ್, ಎಸ್.ಕೃಷ್ಣಾನಾಯ್ಕ, ಎಂ. ಸೋಮಪ್ಪ, ಮಂಗಳ, ವಿಜಯಾ, ಚನ್ನಬಸಮ್ಮ, ವೀರೇಶ, ವಿಶ್ವನಾಥ, ಮಂಜುನಾಥ, ಹನುಮಂತಪ್ಪ, ಜಗದೀಶ, ರಾಘವೇಂದ್ರ, ಹಾಲೇಶ, ಕುರುವತ್ತೆಪ್ಪ, ಶಿವಪ್ಪ, ಜಯಪ್ಪ, ಬಸವರಾಜ ಸೇರಿದಂತೆ ಇತರರು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.