ಒಳಮೀಸಲಾತಿ ಜಾರಿ ಮಾಡುವ ಬದ್ಧತೆ ಸರ್ಕಾರಕ್ಕಿಲ್ಲ

| Published : Mar 17 2025, 12:34 AM IST

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಹರಿಹರದಿಂದ ರಾಜಧಾನಿ ಬೆಂಗಳೂರಿಗೆ ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ತಂಡ ಭಾನುವಾರ ನಗರಕ್ಕೆ ಆಗಮಿಸಿದಾಗಿ ವಿವಿಧ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ, ತುಮಕೂರು

ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಹರಿಹರದಿಂದ ರಾಜಧಾನಿ ಬೆಂಗಳೂರಿಗೆ ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ತಂಡ ಭಾನುವಾರ ನಗರಕ್ಕೆ ಆಗಮಿಸಿದಾಗಿ ವಿವಿಧ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.

ಈ ವೇಳೆ ಬಿಜಿಎಸ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಒಳಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಆಯಾ ಸರ್ಕಾರಗಳಿಗೆ ಅವಕಾಶವಿದೆ ಎಂದು ಉಚ್ಛ ನ್ಯಾಯಾಲಯವೇ ತಿಳಿಸಿದೆ, ಆದರೂ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡಲು ಮನಸಿಲ್ಲ. ಅಧಿಕಾರದಲ್ಲಿರುವವವರಿಗೆ ಮಾದಿಗ ಸುಮುದಾಯದ ಸಂಕಷ್ಟಗಳ ಅರಿವಿಲ್ಲ, ನಮ್ಮವರಿಗೆ ಅರಿವಿದ್ದವರೂ ಅಧಿಕಾರಕ್ಕೆ ಅಂಟಿ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಟೀಕಿಸಿದರು.

ಅಧಿಕಾರದ ಆಸೆಯ ನಮ್ಮವರ ಕುಮ್ಮಕ್ಕಿನಿಂದಲೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತ ವಿರೋಧಿ ಧೋರಣೆ ತಳೆದಿದೆ. ಇಲ್ಲವಾಗಿದ್ದಲ್ಲಿ ಒಳಮೀಸಲಾತಿಗೆ ಮಾಡುತ್ತಿದ್ದರು. ಹಳ್ಳಿಗಳಲ್ಲಿ ಮಾದಿಗ ಸಮುದಾಯ ಯಾವ ಪರಿಸ್ಥಿಯಲ್ಲಿದ್ದಾರೆ ಎಂದು ಇವರಿಗೆ ತಿಳಿದಿದೆಯೆ? ಮಾದಿಗರ ಕಷ್ಟ ಅವರಿಗೆ ಬೇಕಾಗಿಲ್ಲ, ಅಧಿಕಾರ, ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯ ಹೊರತು ದಲಿತರ ಹಿತ ಬೇಕಾಗಿಲ್ಲ ಎಂದರು.

ಪಾದಯಾತ್ರೆಯ ನೇತೃತ್ವ ವಹಿಸಿರುವ ಭಾಸ್ಕರ ಪ್ರಸಾದ್ ಮಾತನಾಡಿ, ನಮ್ಮದು ನ್ಯಾಯಯುತ ಹೋರಾಟ, ಯಾರ ಹಕ್ಕನ್ನೂ ಕಸಿಯುವ ಉದ್ದೇಶವಲ್ಲ, ನಮ್ಮ ಹಕ್ಕು ಪಡೆಯುವ ಹೋರಾಟ. ಸುಪ್ರೀಂ ಕೊರ್ಟ್ ಒಳಮೀಸಲಾತಿ ಜಾರಿ ಮಾಡಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದೆ ಆಯೋಗ ರಚಿಸಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಯ್ಯ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಮಾದಿಗ ಸಮುದಾಯದವರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗಿದೆ. ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ. ಸಮುದಾಯ ಒಗ್ಗಟ್ಟಾಗಿದೆ. ಹೋರಾಟ ತೀವ್ರವಾಗಿದೆ. ಸರ್ಕಾರಕ್ಕೆ ಬದ್ಧತೆಯಿದ್ದರೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಗಂಗಹನುಮಯ್ಯ, ಹೈ ಕೋರ್ಟ್ ನ್ಯಾಯವಾದಿ ಅರುಣ್‌ಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ದಲಿತ ಮುಖಂಡರಾದ ಕೋಡಿಯಾಲ ಮಹದೇವ್, ಬಂಡೆ ಕುಮಾರ್, ಕೊಟ್ಟ ಶಂಕರ್, ಪಿ.ಎನ್.ರಾಮಯ್ಯ, ಎನ್.ಆರ್.ಕಾಲೋನಿ ಕಿರಣ್, ಮರಳೂರು ಕೃಷ್ಣಮೂರ್ತಿ, ಮೋಹನ್‌ಕುಮಾರ್, ಮಲ್ಲಿಕ್, ಕ್ಯಾತ್ಸಂದ್ರ ನರಸಿಂಹಮೂರ್ತಿ, ಹನುಮೇಶ್ ಗುಡೂರು ಮೊದಲಾದ ಮುಖಂಡರು ಭಾಗವಹಿಸಿದ್ದರು.

ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚಾರ ಮಾಡಿದ ಪಾಯಾತ್ರೆ ತಂಡ ಬೆಂಗಳೂರಿನತ್ತ ತೆರಳಿತು. ಜಿಲ್ಲೆಯ ಹಲವು ದಲಿತ ಮುಖಂಡರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಸಾಗಿದರು.