ನೇಕಾರರ ಗೋಳು ಕೇಳದ ಸರ್ಕಾರ: ಏಳನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ

| Published : Nov 25 2024, 01:00 AM IST

ನೇಕಾರರ ಗೋಳು ಕೇಳದ ಸರ್ಕಾರ: ಏಳನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯೊಳಗಿನ ಯಂತ್ರಗಳನ್ನು ಸತ್ಯಾಗ್ರಹ ಸ್ಥಳಕ್ಕೆ ತಂದು ನೂಲು ಸುತ್ತುವ ಮೂಲಕ ಹೋರಾಟಕ್ಕೆ ಇಳಿದಿರುವುದು ವಿಶೇಷ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬನಹಟ್ಟಿ ಕೆಎಚ್‌ಡಿಸಿ ಪ್ರಧಾನ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಕೈಮಗ್ಗ ನೇಕಾರರ ಅನಿರ್ದಿಷ್ಟಾವಧಿ ಸತ್ಯಾಗ್ರಹವು ೭ನೇ ದಿನಕ್ಕೆ ಕಾಲಿರಿಸಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸ್ಪಂದನೆಯಿಂದ ದೂರ ಉಳಿದಿದ್ದು, ಸತ್ಯಾಗ್ರಹ ೬ ದಿನ ಪೂರೈಸಿ ಸೋಮವಾರ ೭ನೇ ದಿನಕ್ಕೆ ಕಾಲಿಟ್ಟಿದೆ.ನಿವೇಶನ, ಉತಾರೆ, ನಿರಂತರ ಉದ್ಯೋಗ, ೫೫ ವಯೋಮಾನದ ಹಿರಿಯ ನೇಕಾರರಿಗೆ ಮಾಸಾಶನ ನೀಡಿಕೆ, ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳಿಗೆ ಸ್ಪಂದಿಸುವಂತೆ ನಿಗಮ ಹಾಗೂ ಸರ್ಕಾರಕ್ಕೆ ನಿರಂತರ ಒತ್ತಾಯಪಡಿಸಿದ್ದರೂ ಪ್ರಯೋಜನವಾಗದ ಕಾರಣ ಕೈಮಗ್ಗ ನೇಕಾರರು ಸತ್ಯಾಗ್ರಹದ ಮೊರೆ ಹೋಗಿದ್ದು, ಇವರ ಸಮಸ್ಯೆಗೆ ಸರ್ಕಾರದ ಸ್ಪಂದನೆ ಸಿಗದಿರುವುದು ವಿಪರ್ಯಾಸವಾಗಿದೆ.

ಕಾಯಕದೊಂದಿಗೆ ಸತ್ಯಾಗ್ರಹ:

ಮನೆಯೊಳಗಿನ ಯಂತ್ರಗಳನ್ನು ಸತ್ಯಾಗ್ರಹ ಸ್ಥಳಕ್ಕೆ ತಂದು ನೂಲು ಸುತ್ತುವ ಮೂಲಕ ಹೋರಾಟಕ್ಕೆ ಇಳಿದಿರುವುದು ವಿಶೇಷ. ಉದ್ಯೋಗ ಭದ್ರತೆಗೆ ಅವಕಾಶ ನೀಡಬೇಕು. ಸಾಲ ಸೌಲಭ್ಯಕ್ಕೆ ಸರ್ಕಾರ ಸೂಕ್ತ ದಾಖಲೆ ಒದಗಿಸುವ ಮೂಲಕ ಸಹಕಾರ ನೀಡುವಂತೆ ಸತ್ಯಾಗ್ರಹಿಗಳ ಒತ್ತಾಯವಾಗಿದೆ.

ಡಚ್ ಯೋಜನೆಯಡಿ ೩೦೦ಕ್ಕೂ ಅಧಿಕ ಮನೆಗಳು ನಿರ್ಮಾಣವಾಗಿ ೨೦ ವರ್ಷಗಳೇ ಗತಿಸಿವೆ. ಇಂದಿಗೂ ಉತಾರ ಹಂಚಿಕೆಯಾಗಿಲ್ಲ. ನೂರಕ್ಕೂ ಅಧಿಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಂಥವರಿಗೆ ಸೂರು ಇಲ್ಲದ ಕಾರಣ ಬಾಡಿಗೆ ಹಣ ನೀಡಿ ಕುಟುಂಬ ನಿರ್ವಹಣೆ ಮಾಡುವುದು ನೇಕಾರ ವರ್ಗಕ್ಕೆ ಸಮಸ್ಯೆ ತೀವೃವಾಗಿದೆ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ತಿಳಿಸಿದರು.

ವೈಯಕ್ತಿಕ ಶೌಚ ನಿರ್ಮಾಣಕ್ಕೆ ಸರ್ಕಾರದ ನೆರವಿಲ್ಲ. ಸರ್ಕಾರದ ಯೋಜನೆಗಳಂತು ನೇಪಥ್ಯಕ್ಕೆ ಸರಿದಿವೆ. ಹೀಗಾಗಿ ನೇಕಾರರು ಭದ್ರತೆಯಿಲ್ಲದ ಬದುಕು ಸಾಗಿಸುತ್ತಿದ್ದು, ಸರ್ಕಾರ ಹಾಗೂ ನಿಗಮ ಶೀಘ್ರವೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.

ಕಳೆದ ಆರು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಯಾವೊಬ್ಬ ಪ್ರತಿನಿಧಿ ಅಥವಾ ಅಧಿಕಾರಿ ಸ್ಪಂದನೆ ನೀಡದಿರುವುದು ಬೇಸರ ತಂದಿದೆ. ನೇಕಾರನ ಮರ್ಯಾದೆ ಅಳಿಯುವ ಸಂದರ್ಭ ಸಹಾಯಕ್ಕೆ ಬಾರದಿರುವುದು ನಾಚಿಕೆಗೇಡಿನ ಸಂಗತಿ.

ದ್ರಾಕ್ಷಾಯಿಣಿ ಅಂಬಿ, ನೇಕಾರ ಮಹಿಳೆ ಬನಹಟ್ಟಿ