ಸಾರಾಂಶ
ಒಳಾಂಗಣ ಕ್ರೀಡಾಂಗಣ, ನೆಹರೂ ಸ್ಟೇಡಿಯಂನಲ್ಲಿ ಸ್ವಚ್ಛತಾ ಕಾರ್ಯ । ಪರೋಪಕಾರಂನಿಂದ ಆಯೋಜನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಸ್ವಚ್ಛ, ಸುಂದರ ಮತ್ತು ಮಾಲಿನ್ಯರಹಿತ ಪರಿಸರ ನಿರ್ಮಾಣ ಅಗತ್ಯ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ಒತ್ತಡದ ನಡುವೆಯೂ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಪರೋಪಕಾರಂನ ಎನ್.ಎಂ. ಶ್ರೀಧರ್ ಸಲಹೆ ನೀಡಿದರು.
ಪರೋಪಕಾರಂ ವತಿಯಿಂದ ಭಾನುವಾರ ಬೆಳಗ್ಗೆ ಶಿವಮೊಗ್ಗದ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಹಾಗೂ ನೆಹರೂ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಅಧಿಕಾರಿಗಳು ತಮ್ಮ ದೈಹಿಕ ಆರೋಗ್ಯ ವೃದ್ಧಿಸಿಕೊಂಡಲ್ಲಿ ಕರ್ತವ್ಯ ದಕ್ಷತೆ ಹೆಚ್ಚಿಸಿಕೊಳ್ಳಲು ಸಾಧ್ಯ. ಅಲ್ಲದೆ ಅಧಿಕಾರಿಗಳು ನಡೆಸುವ ಸ್ವಚ್ಛತಾ ಕಾರ್ಯ ತಮ್ಮ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಜನಕ್ಕೂ ಪ್ರೇರಣೆಯಾಗಲಿದೆ ಎಂದರು.
ಕ್ರೀಡಾಪಟುಗಳು ದೈಹಿಕ ಹಾಗೂ ಮಾನಸಿಕ ಸದೃಢತೆ ಪಡೆದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯನ್ನು ವೃತ್ತಿಯಾಗಿ ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕ್ರೀಡೆಯ ಜತೆಗೆ ಓದಿಗೂ ಮಹತ್ವ ನೀಡಬೇಕೆಂದು ತಿಳಿಸಿದರು.ಬೀದಿ ಬದಿಯಲ್ಲಿ ದೊರೆಯುವ ಕಳಪೆ ಗುಣಮಟ್ಟದ ಆಹಾರ ಪದಾರ್ಥ, ಜಂಕ್‍ಫುಡ್‍ಗಳಿಂದ ದೂರವಿದ್ದು, ಪೌಷ್ಟಿಕ ಆಹಾರ ಸೇವಿಸಿ ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲ, ಕ್ರೀಡಾಂಗಣ ಹಾಗೂ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಗೆ ಗಮನ ನೀಡಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಮಾತನಾಡಿ, ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಆರೋಗ್ಯ ಹಾಗೂ ಏಕಾಗ್ರತೆ ಸುಧಾರಿಸುತ್ತದೆ. ಇದರಿಂದ ಓದಿಗೂ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲಿಕ್ಕೆ ಆಗುವುದಿಲ್ಲ ಎಂಬ ಭಾವನೆ ಸರಿಯಲ್ಲ ಎಂದು ಹೇಳಿದರು.ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮ, ಸಮನಾಗಿ ಮುಂದುವರಿಸಿಕೊಂಡು ಸಾಧನೆ ಮಾಡಬೇಕು. ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಲ್ಲದೆ ಬಹುಮಾನ ಮತ್ತು ಪದಕ ಪಡೆದು ಭಾರತದ ಗೌರವ ಮೆರೆಯಬೇಕು ಎಂದು ಆಶಿಸಿದರು.
ಪರೋಪಕಾರಂನ ಎನ್.ಎಂ.ಲೀಲಾಬಾಯಿ, ಅನಿಲ್ ಹೆಗ್ಗಡೆ, ರಾಘವೇಂದ್ರ ಮಹೇಂದ್ರಕರ್, ಶ್ರೀಕಾಂತ್ ಹೊಳ್ಳ, ರಾಯಲ್ ಮೆಡೆಕಲ್ಸ್‌ನ ಎಸ್.ಎಸ್. ಲೋಹಿತ್, ಗಾಡಿಕೊಪ್ಪ ಕುಮಾರ್, ಕಾಂತಾರ ಅಶೋಕ್, ದೇವೇಂದ್ರಪ್ಪ, ಕುಮಾರ್, ವಚನ ಜಗದೀಶ್, ರಾಘವೇಂದ್ರ ಪೈ, ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು.