ಹೆಚ್ಚುತ್ತಿರುವ ಆನ್‌ ಲೈನ್ ವಂಚನೆಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಚಿಂತನೆ : ಒಡಂಬಡಿಕೆ

| Published : Jul 22 2024, 01:27 AM IST / Updated: Jul 22 2024, 12:04 PM IST

ಹೆಚ್ಚುತ್ತಿರುವ ಆನ್‌ ಲೈನ್ ವಂಚನೆಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಚಿಂತನೆ : ಒಡಂಬಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚುತ್ತಿರುವ ಸೈಬರ್ ಕ್ರೈಮ್ ಮತ್ತು ವಂಚನೆ ಸಮಸ್ಯೆಗಳ ವಿರುದ್ಧ ಹೋರಾಡಲು ಹಾಗೂ ಸೈಬರ್ ಸುರಕ್ಷತೆಯನ್ನು ಕಾಪಾಡಿಕೊಳ್ಳಲು

   ತುಮಕೂರು :  ಹೆಚ್ಚುತ್ತಿರುವ ಸೈಬರ್ ಕ್ರೈಮ್ ಮತ್ತು ವಂಚನೆ ಸಮಸ್ಯೆಗಳ ವಿರುದ್ಧ ಹೋರಾಡಲು ಹಾಗೂ ಸೈಬರ್ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಗರದ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಐಎಸ್‌ಎಸಿ ಫೌಂಡೇಶನ್ ಸಹಯೋಗದಲ್ಲಿ ಪರಸ್ಪರ ಮಾತುಕತೆ ನಡೆಸಿ, ಒಡಂಬಡಿಕೆ ಸಹಿ ಮಾಡಲಾಯಿತು.

ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನ ಸಭಾಂಗಣದಲ್ಲಿ ನಡೆದ ಈ ಮಾತುಕತೆಯ ವೇಳೆ ಸೈಬರ್ ಅಪರಾಧ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಸೈಬರ್ ಭದ್ರತೆಯನ್ನು ಸ್ಥಾಪಿಸಲು "ಕಾಪ್ ಕನೆಕ್ಟ್ ಕೆಫೆ " ಅನ್ನು ಕೇಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸುವ ಉದ್ದೇಶದಿಂದ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್‌ ಹಾಗೂ ಐಎಸ್‌ಎಸಿ ಫೌಂಡೇಶನ್ ನಿರ್ದೇಶಕ ಕ್ಯಾಪ್ಟನ್ ಪಿ ಆನಂದ್ ನಾಯ್ಡು ಅವರನ್ನು ಒಳಗೊಂಡ ನಿಯೋಗ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ, ಪರಸ್ಪರ ವಿನಿಮಯ ಮಾಡಿಕೊಂಡಿತು. 

ಡಾ.ಜಿ.ಪರಮೇಶ್ವರ್‌ ಮಾತನಾಡಿ, ಎರಡು ಸಂಸ್ಥೆಗಳ ಜೊತೆಗೂಡಿ ಆನ್‌ಲೈನ್ ಬೆದರಿಕೆಗಳನ್ನು ಎದುರಿಸಲು ಅಗತ್ಯವಿರುವ ಜ್ಞಾನ, ತರಬೇತಿ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಧಿಕಾರ ನೀಡುವ ಮೂಲಕ ಸೈಬರ್‌ ಸೆಕ್ಯುರಿಟಿ ನೆಟ್‌ವರ್ಕ್‌ನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇವೆ. ಕೆಫೆಯು ಸಾಮಾನ್ಯ ಸೈಬರ್ ಸುರಕ್ಷತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕಾಲೇಜುಗಳಲ್ಲಿ ಸೈಬರ್ ನೈರ್ಮಲ್ಯವನ್ನು ಹೆಚ್ಚಿಸಲು ಮಹಿಳಾ ಸುರಕ್ಷತಾ ಕ್ಲಬ್‌ಗಳನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.ಸೈಬರ್ ವಂಚನೆ ಸಮಸ್ಯೆಗಳ ಕುರಿತು ತಜ್ಞರ ಸಹಾಯ ಮತ್ತು ಸಲಹೆಯನ್ನು ಪಡೆಯಲು ಸುರಕ್ಷಿತ ವಾತಾವರಣವನ್ನು ಒಳಗೊಂಡ ಕೇಂದ್ರವನ್ನು ಕ್ಯಾಂಪಸ್ ನಲ್ಲಿ ತೆರೆದು ಸೈಬರ್ ಅಪರಾಧಗಳಿಂದ ಪ್ರಭಾವಿತರಾದವರಲ್ಲಿ ಜಾಗೃತಿ ಮೂಡಿಸಲು ಸೈಬರ್ ಮನಶಾಸ್ತ್ರಜ್ಞರು, ತಾಂತ್ರಿಕ ತಜ್ಞರು ಮತ್ತು ಕಾನೂನು ಸಲಹೆಗಾರರ ತಂಡವನ್ನು ಸಂಯೋಜಿಸುತ್ತದೆ ಎಂದು ತಿಳಿಸಿದರು.

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ವಿಶೇಷವಾಗಿ ಸೈಬರ್ ಕ್ರೈಂ ಗಳಿಗಾಗಿ ಪೋಲೀಸ್ ಠಾಣೆಯನ್ನು ಆರಂಭಿಸಲಾಗಿದ್ದು, ಈಗ ೪೩ ಠಾಣೆಗಳು ವಿಶೇಷವಾಗಿ ಸೈಬರ್ ಅಪರಾಧಗಳ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ಸೈಬರ್ ಅಪರಾಧ ಮತ್ತು ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಚಿಂತನೆಯನ್ನು ಸರ್ಕಾರ ನಡೆಸುತ್ತಿದೆ. ಸಾರ್ವಜನಿಕನ್ನು ವಂಚಿಸುತ್ತಿರುವ ಜಾಲವನ್ನು ಹತೋಟಿಗೆ ತರಲು ಶೀಘ್ರವೇ ರಾಜ್ಯದಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.ಎಡಿಜಿಪಿ ಹುದ್ದೆಗೆ ಈಗಾಗಲೇ ನೇಮಕಾತಿ ಆರಂಭಿಸಲಾಗಿದ್ದು, ಎಷ್ಟು ಸಿಬ್ಬಂದಿಗಳ ಅವಶ್ಯಕತೆ ಇದೆಯೋ ತರಬೇತಿ ನೀಡಿ ನಿಯೋಜಿಸಲಾಗುವುದು. ಯಾವುದೇ ಕಾರಣಕ್ಕೂ ಸೈಬರ್ ಅಪರಾಧ ಪ್ರಕರಣಗಳನ್ನು ಹೆಚ್ಚಾಗಲು ಬಿಡುವುದಿಲ್ಲ. 

ಯಾವುದೇ ವ್ಯಕ್ತಿಗೆ ಸೈಬರ್ ವಂಚನೆಯಾದರೆ ಕಾನೂನು ಸುವ್ಯವಸ್ಥೆಯ ಠಾಣೆಯಲ್ಲಿಯೂ ದೂರು ದಾಖಲಿಸಬಹುದು. ಸೈಬರ್ ಪ್ರಕರಣಗಳನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲು ಸಿಐಡಿ ಘಟಕದಲ್ಲಿ ಸಿಇಎನ್ ವಿಭಾಗಕ್ಕೆ ವರ್ಗಾಯಿಸಿ ತನಿಖೆ ನಡೆಸುವ ಬಗ್ಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಐಎಸ್‌ಎಸಿ ನ ನಿರ್ದೇಶಕರಾದ ಕ್ಯಾಪ್ಟನ್ ಪಿ ಆನಂದ್ ನಾಯ್ಡು, ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎಂ.ಜೆಡ್.ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಡೀನ್ ರೇಣುಕಾ ಲತಾ, ಐಎಸ್‌ಎಸಿ ಫೌಂಡೇಶನ್ ಕೈಲಾಸ್, ವಿನಯ್, ವಿಶಾಲ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಜಂಟಿ ಒಪ್ಪಂದ ಸಭೆಯಲ್ಲಿ ಪಾಲ್ಗೊಂಡಿದ್ದರು.ಫೋಟೋ.......