ಸಮಗ್ರ ಶಿಕ್ಷಣ ಇಲಾಖೆ ಮಕ್ಕಳ ಸಾಹಿತ್ಯವನ್ನು ವಿಸ್ತರಿಸುವುದಕ್ಕೆ ಪುಸ್ತಕಗಳ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇಲಾಖೆ ಖರೀದಿಸುತ್ತಿರುವ ಪುಸ್ತಕಗಳಲ್ಲಿ ಮಕ್ಕಳ ಪುಸ್ತಕಗಳು ಒಂದು ಕೂಡ ಇಲ್ಲ. ಇನ್ನೂ ಪ್ರಕಟವಾಗದಿರುವ ಪುಸ್ತಕಗಳು, ೫೦೦ ಪುಟಗಳಿರುವ ಮಕ್ಕಳ ಸಾಹಿತ್ಯಕ್ಕೆ ಹೊರತಾದ ಪುಸ್ತಕಗಳನ್ನು ಖರೀದಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಳುವ ಸರ್ಕಾರಗಳು ಜಾರಿಗೊಳಿಸುವ ನೀತಿಗಳಿಗೆ ತಾಯಿಗುಣವಿರಬೇಕು. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ತಾಯಿ ಮನಸ್ಸು ಇರಬೇಕು. ಆದರೆ, ಈಗಿರುವ ಸರ್ಕಾರಗಳು ಒಳ್ಳೆಯ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ಕೊಡುವಲ್ಲಿ, ನೀತಿ-ನಿಯಮಗಳನ್ನು ರೂಪಿಸುವಲ್ಲಿ ಕುರುಡಾಗಿವೆ ಎಂದು ಅವಧಿ ಇ-ಮ್ಯಾಗಜೈನ್ ಸಂಪಾದಕ ಜಿ.ಎನ್.ಮೋಹನ್ ವಿಷಾದಿಸಿದರು.

ಪರಿಚಯ ಪ್ರಕಾಶನದ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಕ್ಕೆ ಮಕ್ಕಳ ಸಾಹಿತ್ಯ ಎಂದರೇನು ಎಂಬುದೇ ಅರ್ಥವಾಗುತ್ತಿಲ್ಲ. ಇದು ನಮ್ಮ ದುರವಸ್ಥೆ. ಮಕ್ಕಳಿಗೆ ಅಗತ್ಯವಾಗಿ ಬೇಕಾದ ಪುಸ್ತಕಗಳನ್ನೇ ಖರೀದಿಸುತ್ತಿಲ್ಲ. ೧೫ ರಿಂದ ೨೦ ಪುಟಗಳಿವೆ, ಮಧ್ಯದಲ್ಲಿ ಪಿನ್ ಮಾಡಲಾಗಿದೆ ಎಂಬ ಕಾರಣಕ್ಕೆ ತಿರಸ್ಕರಿಸುತ್ತಿದೆ. ಇನ್ನೂ ೫೦-೧೦೦ ಪುಟಗಳ ಹಳೆಯ ಕಾಲಕ್ಕೆ ಜೋತುಬಿದ್ದಿವೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಇಂದಿನ ಕಾಲಘಟ್ಟಕ್ಕೆ ಏನು ಬೇಕೋ ಅದನ್ನು ನೀಡುವುದರಲ್ಲಿ ಸರ್ಕಾರಗಳು ವಿಫಲವಾಗಿರುವುದು ದುರದೃಷ್ಟಕರ ಎಂದರು.

ಸಮಗ್ರ ಶಿಕ್ಷಣ ಇಲಾಖೆ ಮಕ್ಕಳ ಸಾಹಿತ್ಯವನ್ನು ವಿಸ್ತರಿಸುವುದಕ್ಕೆ ಪುಸ್ತಕಗಳ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇಲಾಖೆ ಖರೀದಿಸುತ್ತಿರುವ ಪುಸ್ತಕಗಳಲ್ಲಿ ಮಕ್ಕಳ ಪುಸ್ತಕಗಳು ಒಂದು ಕೂಡ ಇಲ್ಲ. ಇನ್ನೂ ಪ್ರಕಟವಾಗದಿರುವ ಪುಸ್ತಕಗಳು, ೫೦೦ ಪುಟಗಳಿರುವ ಮಕ್ಕಳ ಸಾಹಿತ್ಯಕ್ಕೆ ಹೊರತಾದ ಪುಸ್ತಕಗಳನ್ನು ಖರೀದಿಸುತ್ತಿದೆ. ಹೀಗಾಗಿ ಸರ್ಕಾರಕ್ಕೆ ಮಕ್ಕಳ ಸಾಹಿತ್ಯದ ಬಗ್ಗೆ ಆತ್ಮವೂ ಇಲ್ಲ, ಇಲಾಖೆಗೆ ಬದ್ಧತೆಯೂ ಇಲ್ಲ. ಈ ಕಾರಣಕ್ಕೆ ಸರ್ಕಾರಗಳಿಗೆ ತಾಯಿಮನಸ್ಸು, ತಾಯಿ ಗುಣವಿರಬೇಕು. ಆಗ ಮಾತ್ರೆ ತಾಯಿ ಮಕ್ಕಳಿಗೆ ಏನು ಬೇಕೋ ಅದನ್ನು ಕೊಡುವುದಕ್ಕೆ ಸಾಧ್ಯವಾಗಲಿದೆ ಎಂದರು.

ಮಕ್ಕಳಿಗೆ ಏನು ಓದಬೇಕು ಅನ್ನಿಸುವುದೇ ಅದೇ ಮಕ್ಕಳ ಸಾಹಿತ್ಯ. ಮಗು ಬಯಸುವುದೇ ಒಂದು, ನಾವು ಕೊಡುವುದ ಮತ್ತೊಂದಾಗಬಾರದು. ಈ ಬಿರುಕನ್ನು ತುಂಬದಿದ್ದೆ ಮಕ್ಕಳ ಸಾಹಿತ್ಯಕ್ಕೆ ದಾರಿ ಇರುವುದಿಲ್ಲ ಎಂದ ಅವರು, ಇಂದಿನ ಮಕ್ಕಳಿಗೆ ಮೊಬೈಲ್ ರಿಂಗ್‌ಟೋನ್‌ಗಳೇ ಜೋಗುಳ. ನಮಗಿಂತ ವೇಗವಾಗಿ ಮೊಬೈಲ್‌ನ್ನು ಬಳಸುತ್ತಾರೆ, ಅರ್ಥೈಸಿಕೊಳ್ಳುತ್ತಾರೆ. ಮೊಬೈಲ್‌ನಿಂದ ಮಕ್ಕಳನ್ನು ಬೇರ್ಪಡಿಸಲಾಗದಷ್ಟು ಅದಕ್ಕೆ ಆಕರ್ಷಿತರಾಗಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಇಟ್ಟುಕೊಂಡೇ ಪುಸ್ತಕ ಸಂಸ್ಕೃತಿಯನ್ನು ಅವರಲ್ಲಿ ಬೆಳೆಸಬೇಕಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಸು ವತ್ಸಲೆ ಅವರು, ಮಕ್ಕಳ ಸಾಹಿತ್ಯವೆಂದರೆ ಶೈಕ್ಷಣಿಕವಾಗಿ ಬರೆಯುವುದಲ್ಲ. ಕಲಾತ್ಮಕತೆಗೆ ತಿರುಗಬೇಕು. ಆಗ ಮಕ್ಕಳ ಸಾಹಿತ್ಯಕ್ಕೆ ಮೆರುಗು ಬರಲು ಸಾಧ್ಯ. ಮಕ್ಕಳ ಸಾಹಿತ್ಯಕ್ಕೆ ಚೌಕಟ್ಟು ಹಾಕಿಕೊಳ್ಳುವ ಪದ್ಧತಿ ಬಿಟ್ಟುಹೋಗಬೇಕು. ಮಕ್ಕಳ ಸಾಹಿತ್ಯದಲ್ಲಿ ಪ್ರೌಢ ಸಾಹಿತ್ಯದಲ್ಲಿರುವಂತಹ ಕಿರಿಕಿರಿಗಳು ಇರುವುದಿಲ್ಲ. ಮಕ್ಕಳ ಸಾಹಿತ್ಯ ಓದುವುದರಿಂದ ಮಾನಸಿಕ ದಣಿವು ಕಡಿಮೆಯಾಗುತ್ತದೆ ಎಂದರು.

ಮಕ್ಕಳ ಸಾಹಿತ್ಯದಲ್ಲಿ ಇಂದಿಗೂ ಅಧ್ಯಯನಕ್ಕೆ ಒಳಪಡುವ ಕೃತಿಗಳು ಸಿಗುತ್ತಿಲ್ಲ. ಕುವೆಂಪು, ಬೇಂದ್ರೆ, ಜಿ.ಪಿ.ರಾಜರತ್ನಂ ಸೇರಿದಂತೆ ಹಲವಾರು ಕವಿಗಳು ಮಕ್ಕಳನ್ನು ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಅವೆಲ್ಲವೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಕುರಿತಾಗಿವೆಯೇ ಹೊರತು ಬಾಲ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿಲ್ಲ. ನಮ್ಮದೇ ಬಾಲ್ಯಕ್ಕೆ ನಾವು ಮತ್ತೆ ತಿರುಗಿ ನೋಡಬೇಕು. ಸಂತೃಪ್ತಿಯ ಆಳಕ್ಕೆ ಇಳಿದಾಗ ಮತ್ತೆ ನಾವು ಕಳೆದುಕೊಂಡಿದ್ದೇವೆಂಬ ಬಾಲ್ಯವನ್ನು ತಲುಪಿದ್ದೇವೆ ಎಂದುಕೊಂಡಾಗ ಆ ಸುಪ್ತಪ್ರಜ್ಞೆಯ ಮೂಲಕ ವಿಶ್ವದ ಮಗುವಾಗಲು ಸಾಧ್ಯವಾಗಲಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ವಹಿಸಿದ್ದರು. ೨೦೨೪ನೇ ಸಾಲಿನ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ಅಂತರಿಕ್ಷದಲ್ಲಿ ವಿಹಾ ಕೃತಿಯ ಕರ್ತೃ ವಸು ವತ್ಸಲೆ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರೇಖಾಚಿತ್ರ ಕಲಾವಿದ ಗುಜ್ಜಾರಪ್ಪ, ವಿಕಸನ ಸಂಸ್ಥೆ ಮುಖ್ಯಸ್ಥ ಮಹೇಶ್‌ಚಂದ್ರಗುರು, ಪ್ರಥಮ್ ಬುಕ್ಸ್ ಕನ್ನಡ ವಿಭಾಗದ ಸಂಪಾದಕಿ ಹೇಮಾ ಖುರ್ಸಾಪುರ, ಲೇಖಕ ಟಿ.ಸತೀಶ್‌ಜವರೇಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಎಂ.ವಿನಯ್‌ಕುಮಾರ್, ಕಲಾವಿದ ಸಂತೋಷ್ ಸಸಿಹಿತ್ಲು ಹಾಗೂ ಪರಿಚಯ ಪ್ರಕಾಶನದ ಶಿವಕುಮಾರ ಆರಾಧ್ಯ ಇದ್ದರು.