ಸಾರಾಂಶ
ಶಿರವಾಡದ ಈ ಶಾಲೆಯು ಜಿಲ್ಲೆಯಲ್ಲೇ ಮಾದರಿಯಾಗಿದೆ. ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಎಲ್ಲರೂ ಜತೆಯಾಗಿ ಶಾಲೆ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬೇಕು.
ಕಾರವಾರ:
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಸರ್ಕಾರ ಮೊದಲ ಪ್ರಾತಿನಿಧ್ಯವಾಗಿದ್ದು, ಶಾಲೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿರವಾಡದ ಈ ಶಾಲೆಯು ಜಿಲ್ಲೆಯಲ್ಲೇ ಮಾದರಿಯಾಗಿದೆ. ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಎಲ್ಲರೂ ಜತೆಯಾಗಿ ಶಾಲೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯೋಣ ಎಂದು ಹೇಳಿದರು.
ಸಮಾರಂಭಕ್ಕೆ ಆಮಂತ್ರಿಸಿದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಾರದಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಶಾಲೆಯ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎನಿಸುತ್ತಿದೆ ಎಂದು ಕಿಡಿಕಾರಿದರು.ಗ್ರಾಪಂ ಸದಸ್ಯ ಉಲ್ಲಾಸ ಬಾಂದೇಕರ ಮಾತನಾಡಿ, ಅತಿ ಹೆಚ್ಚು ವಿದ್ಯಾರ್ಥಿಗಳಿರುವ ನಮ್ಮ ಶಾಲೆಗೆ ಕ್ರೀಡಾಂಗಣ ಇಲ್ಲ. ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಮಸ್ಯೆಯಾಗಿದೆ. ಸುಸಜ್ಜಿತ ಆಟದ ಮೈದಾನ ನಿರ್ಮಾಣಕ್ಕೆ ಶಾಸಕರು ಹೆಚ್ಚಿನ ಮಹತ್ವ ನೀಡಬೇಕು ಎಂದು ಮನವಿ ಮಾಡಿದರು.ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಎಸ್‌ಡಿಎಂಸಿ ಉಪಾಧ್ಯಕ್ಷ ಸಂದೀಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಹಳೆ ವಿದ್ಯಾರ್ಥಿ, ಗುತ್ತಿಗೆದಾರ ಸಮೀರ ನಾಯ್ಕ, ಶಾಲಾ ಮುಖ್ಯಾಧ್ಯಾಪಕ ಧ್ರುವ ಆಗೇರ, ಗ್ರಾಪಂ ಸದಸ್ಯರಾದ ಗಂಗಾ ನಾಯ್ಕ, ಪೂಜಾ ಮಾಂಜ್ರೇಕರ, ಪ್ರೌಢಶಾಲೆಯ ಶಿಕ್ಷಕ ದಿನೇಶ ಕಿನ್ನರಕರ, ಮುಖ್ಯಾಧ್ಯಾಪಕ ಅಕ್ತರ ಸೈಯದ್, ಶಿಕ್ಷಕಿಯರಾದ ಅಮಿತಾ, ವಿನಯಾ ನಾಯಕ, ಸಿಸಿಲಿಯಾ, ಸುಮಿತಾ ಗಾಂವಕರ ಇದ್ದರು.