ಒಂದೇ ದಿನದಲ್ಲಿ ವಿಶೇಷಚೇತನ ಮಗುವಿಗೆ ಸರ್ಕಾರಿ ಸವಲತ್ತು ಮಂಜೂರು

| Published : Aug 05 2024, 12:31 AM IST

ಒಂದೇ ದಿನದಲ್ಲಿ ವಿಶೇಷಚೇತನ ಮಗುವಿಗೆ ಸರ್ಕಾರಿ ಸವಲತ್ತು ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಕೃತಿಕ ವಿಕೋಪದಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನದ ಜತೆ ಸರ್ಕಾರದಿಂದ ಸಿಗುವ ಇತರ ಸವಲತ್ತುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ ಸಂಕಷ್ಟಕ್ಕೆ ಸ್ಪಂದಿಸಿ ಒಂದೇ ದಿನದಲ್ಲಿ ವಿಕಲಚೇತನ ಮಗುವಿಗೆ ಸವಲತ್ತುಗಳನ್ನು ವಿತರಣೆ ಮಾಡಿ ಕಾರ್ಕಳ ತಹಸೀಲ್ದಾರ್ ಗಮನ ಸೆಳೆದಿದ್ದಾರೆ.ಪ್ರಾಕೃತಿಕ ವಿಕೋಪದಿಂದ ಗುಡ್ಡ ಕುಸಿತವಾದ ಮಾಳದ ಪ್ರದೇಶಗಳಿಗೆ ಕಾರ್ಕಳ ತಹಸೀಲ್ದಾರ್ ನರಸಪ್ಪ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಎಡಪಾಡಿಯಲ್ಲಿ ಗುಡ್ಡ ಕುಸಿದು ಮನೆಯಂಚಿನವರೆಗೆ ಮಣ್ಣು ಬಿದ್ದಿತ್ತು. ತಹಸೀಲ್ದಾರ್ ಭೇಟಿ ನೀಡಿದ ವೇಳೆ ಕುಸುಮಾಕರ ಬರ್ವೆ ಮತ್ತು ಸೌಮ್ಯ ಬರ್ವೆ ದಂಪತಿಯ ಪುತ್ರಿ ಶ್ರೇಯಾ ಬರ್ವೆ ವಿಶೇಷಚೇತನ ಮಗು ಮನೆಯೊಳಗೆ ಇದ್ದುದನ್ನು ಗಮನಿಸಿದ ತಹಸೀಲ್ದಾರ್ ಶೀಘ್ರವೇ ಸರ್ಕಾರದ ಸವಲತ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲು ಅಜೆಕಾರು ಉಪ ತಹಸೀಲ್ದಾರ್ ನಮಿತ ಅವರಿಗೆ ನಿರ್ದೇಶನ ನೀಡಿದ್ದರು.

ಹುಟ್ಟಿನಿಂದ ಆರು ತಿಂಗಳವರೆಗೆ ಸರಿಯಾಗಿಯೇ ಇದ್ದ ಮಗುವಿಗೆ ಮೂರ್ಚೆರೋಗ ಕಾಣಿಸಿಕೊಂಡ ಬಳಿಕ ಬೆಳವಣಿಗೆ ಕುಂಠಿತವಾಗಿದೆ. ಮಲಗಿದ್ದಲ್ಲೇ ಇದ್ದ ಹೆಣ್ಣು ಮಗುವನ್ನು ಗಮನಿಸಿದ ತಹಸೀಲ್ದಾ‌ರ್ ಆ ಮಗುವಿಗೆ ವಿಶೇಷಚೇತನ ವೇತನ ಸನಲತ್ತು ಒದಗಿಸುವ ಭರವಸೆ ನೀಡಿದ್ದರು. ಆ. 2ರಂದು ಮಗುವಿನ ಹೆಸರಿನಲ್ಲಿ ಮಾಳದ ಯುನಿಯನ್ ಬ್ಯಾಂಕ್ ಖಾತೆ ತೆರೆಸಿದ್ದರು.

ಉಪ ತಹಸೀಲ್ದಾರ್ ನೇತೃತ್ವ: ಕಾರ್ಕಳ ತಹಸೀಲ್ದಾರ್ ನರಸಪ್ಪ ಆದೇಶದ ಮೇರೆಗೆ ಅಜೆಕಾರು ನಾಡ ಕಚೇರಿ ಉಪ ತಹಸೀಲ್ದಾರ್ ನಮಿತ ಮಗುವಿನ ಕುಟುಂಬಕ್ಕೆ ಸಹಾಯ ಮಾಡಿದ್ದರು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ‌.ವೀಣಾ ಅವರ ನೇತೃತ್ವದಲ್ಲಿ ವಿಶೇಷ ಚೇತನ ಮಗುವಿನ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಂಗ್ರಹಿಸಿ ಉಪ ತಹಸೀಲ್ದಾರ್ ನಮಿತ ಎಲ್ಲ ಕಡತಗಳನ್ನು ಸಂಗ್ರಹಿಸಿ ಕಾರ್ಕಳ ತಹಸೀಲ್ದಾ‌ರ್ ಕಚೇರಿಯಲ್ಲಿ ಶುಕ್ರವಾರ, ಒಂದೇ ದಿನದೊಳಗೆ ಅಂಗವಿಕಲ ವೇತನದ ಮಂಜೂರಾತಿ ಪತ್ರ ವಿತರಿಸಿದ್ದಾರೆ.ಭೇಷ್ ಎಂದ ಜನ: ಕಳೆದ ಫೆಬ್ರವರಿ ತಿಂಗಳಲ್ಲಿ ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದ 70 ವರ್ಷದ ಶೀಲ ಮಲೆಕುಡಿಯ ಅವರಿಗೆ ಕೇವಲ ನಾಲ್ಕೆ ಗಂಟೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ ಮಂಜೂರಾತಿ ಪತ್ರ ಹಸ್ತಾಂತರ ಮಾಡಿದ್ದರು. ಈ ಕಾರ್ಯವೈಖರಿ ಗೆ ಜನ ಭೇಷ್ ಎನಿಸಿದ್ದರು.

ನರಸಪ್ಪ ತಹಸೀಲ್ದಾರ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದವರು. ಕಾರ್ಕಳ ತಹಸೀಲ್ದಾರ್ 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆ ಎ ಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿ ಯಾಗಿ ಸೇವೆ ಸಲ್ಲಿಸಿ ಬಳಿಕ ಕಾರ್ಕಳ ತಹಸೀಲ್ದಾರ್ ಆಗಿ ನವೆಂಬರ್ ನಲ್ಲಿ ನಿಯೋಜನೆಗೊಂಡವರು. ಈಗ ಬಳ್ಳಾರಿಗೆ ವರ್ಗಾವಣೆಗೊಂಡಿದ್ದಾರೆ. ಕೆಲವೇ ದಿನದಲ್ಲಿ ಅಲ್ಲಿ ಕರ್ತವ್ಯಕ್ಕೆವರದಿ ಮಾಡಿಕೊಳ್ಳಲಿದ್ದಾರೆ.ಮಾಳ ಯೂನಿಯನ್ ಬ್ಯಾಂಕ್ ಸಿಬ್ಬಂದಿ ವರ್ಗ, ಅಜ್ಜರಕಾಡು ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಕಂದಾಯ ನಿರೀಕ್ಷಕ ಮಹಮ್ಮದ್ ರಿಯಾಜ್ , ಗ್ರಾಮ ಆಡಳಿತ ಅಧಿಕಾರ ರವಿಚಂದ್ರ ಪಾಟೀಲ್ , ಅಜೆಕಾರು ನೆಮ್ಮದಿ ಕೇಂದ್ರ ದ ಸುರೇಂದ್ರ, ಅನಿತಾ ಸಹಕಾರ ನೀಡಿದ್ದರು.

ಪ್ರಾಕೃತಿಕ ವಿಕೋಪದಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನದ ಜತೆ ಸರ್ಕಾರದಿಂದ ಸಿಗುವ ಇತರ ಸವಲತ್ತುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಪ್ರಾಕೃತಿಕ ವಿಕೋಪ, ಗುಡ್ಡ ಕುಸಿತದ ಸಂದರ್ಭದಲ್ಲಿ ಮಾಳಕ್ಕೆ ತೆರಳಿದ ವೇಳೆ ವಿಶೇಷ ಚೇತನ ಮಗುವನ್ನು ಗಮನಿಸಿದ್ದೆ. ಸರ್ಕಾರದ ಯೋಜನೆಯನ್ನು ಪ್ರಾಮಾಣಿಕ ವಾಗಿ ಒದಗಿಸುವ ಕಾರ್ಯ ಮಾಡಿದ್ದೇನೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳು ಪಡೆಯಬೇಕು.

। ನರಸಪ್ಪ, ಕಾರ್ಕಳ ತಹಸೀಲ್ದಾರ್ ‌ಕಾರ್ಕಳ ತಹಸೀಲ್ದಾರ್ ನರಸಪ್ಪ ಹಾಗೂ ಉಪತಹಸೀಲ್ದಾರ್ ನಮಿತ ಅವರ ಮಾನವೀಯ ಕಾಳಜಿ ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.

। ಸೌಮ್ಯ ಬರುವೆ ಮಗುವಿನ ತಾಯಿ