ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಫಟಪ್ರಭಾ ನದಿ ಪ್ರವಾಹದಿಂದ ತಾಲೂಕಿನ ಅನೇಕ ಗ್ರಾಮಗಳ ಜನರು ಇದೀಗ ಅಕ್ಷರಶಃ ಬೀದಿಗೆ ಬಿದಿದ್ದಾರೆ. ಆದರೆ, ಇದೀಗ ನಿಧಾನವಾಗಿ ನೆರೆ ಕಡಿಮೆ ಆಗುತ್ತಿದೆ. ಇದರಿಂದ ಪ್ರವಾಹದಲ್ಲಿ ಎಲ್ಲವನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರಿಗೆ ಭವಿಷ್ಯದ ಚಿಂತೆ ಒಂದೆಡೆಯಾದರೆ ಮನೆಯ ಸದಸ್ಯರಂತೆ ಇರುವ ಜಾನುವಾರುಗಳ ಸಾಕಿ ಸಲಹುದು ದುಸ್ತರವಾದಂತಾಗಿದೆ.
ಹೌದು, ರಬಕವಿ-ಬನಹಟ್ಟಿ ತಾಲೂಕಿನ ಘಟಪ್ರಭಾ ನದಿ ತಟದ ಗ್ರಾಮಗಳಾದ ಢವಳೇಶ್ವರ, ನಂದಗಾಂವ ಸಂತ್ರಸ್ತರು ಬಾಧಿತರಾಗಿದ್ದರೆ, ಮಹಾನದಿ ಕೃಷ್ಣೆಯ ಅಬ್ಬರಕ್ಕೆ ತಮದಡ್ಡಿ, ಹಳಿಂಗಳಿ, ಆಸ್ಕಿ, ಕುಲಹಳ್ಳಿ, ಹಿಪ್ಪರಗಿ ಗ್ರಾಮಗಳ ಸಂತ್ರಸ್ತರು ಸತತ ೧೬ ದಿನಗಳ ಕಾಲ ಪ್ರವಾಹದಿಂದ ಕಂಗಾಲಾಗಿದ್ದು, ದುಡಿದು ತಿನ್ನುವ ಬಡ ಕುಟುಂಬಗಳು ಕೈಗಳಿಗೆ ದುಡಿಮೆಯಿಲ್ಲದೇ ಕುಟುಂಬ ನಿರ್ವಹಿಸಲು ಹೈರಾಣಾಗಿದ್ದಾರೆ.ಮೇವಿಗಾಗಿ ಪರದಾಟ:
ಸರ್ಕಾರಿ ಅಂಕಿ-ಅಂಶಗಳು ಮತ್ತು ಪ್ರವಾಹ ಪೀಡಿತರ ನೈಜ ಸಂಖ್ಯೆಗಳು ಭಿನ್ನವಾಗಿದ್ದು, ಬೆಳೆದ ಬೆಳೆಯನ್ನು ದನಕರುಗಳಿಗೆ ಮೇವಾಗಿಯಾದರೂ ಬಳಸಲೂ ಯತ್ನಿಸದಂತಾಗಿದ್ದು, ಸರ್ಕಾರ ಊರು ಕೊಳ್ಳೆಹೊಡೆದ ಬಳಿಕ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಇದೀಗ ಹೊಸದಾಗಿ ಸರ್ವೇ ನಡೆಸಿ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಅವಕಾಶ ಕಲ್ಪಿಸಲು ಮತ್ತು ಜಾನುವಾರುಗಳಿಗೆ ಮೇವು ನೀಡಲು ಉದ್ದೇಶಿಸಿರುವುದರಿಂದ ರೈತರು ತಮ್ಮ ಜಾನುವಾರುಗಳ ಮೇವಿಗಾಗಿ ಪರದಾಡುವ ದುಸ್ಥಿತಿ ಎದುರಾಗಿದೆ.ಕಾಟಾಚಾರಕ್ಕೆ ಮೇವು ವಿತರಣೆ:
ಆಸ್ಕಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿದ್ದರೂ ಪುನರ್ವಸತಿಗೆ ಜಾಗೆ ಕಲ್ಪಿಸದ ಸರ್ಕಾರದ ನಡೆಯಿಂದಾಗಿ ಸಂತ್ರಸ್ತರು ಇದೇ ಗೋಳಾಟದಲ್ಲಿದ್ದಾರೆ. ಗ್ರಾಮಕ್ಕೆ ಹತ್ತಿಕೊಂಡಿರುವ ಆದರೆ ಮುಳುಗಡೆಯಾಗದ ಆಸಂಗಿ ಗ್ರಾಮದ ಬಹುತೇಕ ಜಮೀನುಗಳು ಜಲಾವೃತಗೊಂಡಿದ್ದರೂ ನಯಾಪೈಸೆ ಪರಿಹಾರ ಬಾರದ್ದರಿಂದ ಕಂಗಾಲಾಗಿದ್ದಾರೆ. ಕುಲಹಳ್ಳಿ ಮತ್ತು ಹಿಪ್ಪರಗಿ ಗ್ರಾಮಗಳ ಜಲಾವೃತ ಜಮೀನುಗಳ ಸ್ಥಿತಿಯೂ ಇದೇ ತೆರನಾಗಿದೆ. ಮೇವು ಕೊರತೆ ಕಾರಣ ಜಾನುವಾರುಗಳ ಸಂರಕ್ಷಣೆಯೇ ಬಹುದೊಡ್ಡ ಹೊರೆಯಾಗಿದೆ. ಸರ್ಕಾರ ಮಾತ್ರ ಇನ್ನೂ ನಿಖರ ಸರ್ವೇ ನಡೆಸಿ ಮೇವು ನೀಡುವುದಾಗಿ ತಿಳಿಸಿದ್ದು, ಕಾಟಾಚಾರಕ್ಕೆ ಸಂತ್ರಸ್ತರಲ್ಲಿ ಕೆಲವರಿಗೆ ಮಾತ್ರ ಮೇವು ಪೂರೈಸಿ ಕೈತೊಳೆದುಕೊಳ್ಳುತ್ತಿದೆ.ಬೆಳೆ ಹಾನಿ ಚಿಂತೆ:
ಮುಳುಗಡೆಯಾದ ರೈತರಿಗೆ ಬೆಳೆ ಹಾನಿಯಾಗಿರುವುದು ಚಿಂತೆಯಾಗಿದ್ದರೆ, ನದಿಪಾತ್ರದಲ್ಲಿನ ಮೋಟರ್‌ಗಳನ್ನು ಕಿತ್ತಿರುವುದರಿಂದ ಮೇಲ್ಗಡೆ ಪ್ರದೇಶದ ಜಮೀನುಗಳಿಗೆ ನೀರು ಹಾಯಿಸಲು ಮತ್ತು ಕಸ ತೆಗೆದು ಗೊಬ್ಬರ ಹಾಕಲು ಅವಕಾಶವಿಲ್ಲದಂತಾಗಿದೆ. ಕಣ್ಣೆದುರೇ ಬೆಳೆ ಹಾನಿಗೊಳಗಾದ್ದನ್ನು ಸಹಿಸದಂತಾಗಿದೆ. ತಮದಡ್ಡಿಯ ೪೨ ಕುಟುಂಬಗಳು ತೇರದಾಳ ರಸ್ತೆ ಮೇಲೆ ಆಶ್ರಯ ಪಡೆದುಕೊಂಡಿದ್ದರೆ, ಸಂಪೂರ್ಣ ಮುಳುಗಡೆ ಗ್ರಾಮವಾಗಿರುವ ಆಸ್ಕಿಯ ೫೪೭ ಕುಟುಂಬಗಳ ಸಂತ್ರಸ್ತರು ಆಹಾರ ಮತ್ತು ಜಾನುವಾರುಗಳ ಮೇವಿಗಾಗಿ ಪರಿತಪಿಸುವಂತಾಗಿದೆ. ಕುಲಹಳ್ಳಿ ಮತ್ತು ಹಿಪ್ಪರಗಿ ಗ್ರಾಮಗಳಲ್ಲಿನ ಸಂತ್ರಸ್ತರಲ್ಲಿ ಕೆಲವೇ ಜನ ಮತ್ತು ಜಾನುವಾರುಗಳು ಕಾಳಜಿಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದು, ಉಳಿದವರು ತಮ್ಮ ಸಂಬಂಧಿಗಳ ಮನೆಗಳಲ್ಲಿ ಆಶ್ರಿತರಾಗಿದ್ದಾರೆ. ಅಂಥ ಸಂತ್ರಸ್ತರು ಬೆಳೆದು ನಿಂತ ಪೈರು ಜಲಾವೃತಗೊಂಡಿದ್ದರೂ ಜಾನುವಾರುಗಳ ಮೇವಿಗಾಗಿ ಅಲೆದಾಡುವಂತಾಗಿದೆ.---
ಬಾಕ್ಸ್ಕಾಳಜಿ ಕೇಂದ್ರದಲ್ಲಿ ೮೮೩ ಜನ ಆಶ್ರಯ
ತಾಲೂಕಿನಲ್ಲಿ ಒಟ್ಟು ೭ ಕಾಳಜಿಕೇಂದ್ರಗಳನ್ನು ಆರಂಭಿಸಿದ್ದು, ೮೮೩ ಜನ ಆಶ್ರಯ ಪಡೆದಿದ್ದಾರೆ. ಮಳೆಯಿಂದ ಒಟ್ಟು ೧೫ ಮನೆಗಳು ಧರಾಶಾಹಿಯಾಗಿದ್ದರೆ, ೨೭೩೪ ಹೆಕ್ಟೇರ್ ಕೃಷಿ ಮತ್ತು ೭.೩೦ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸರ್ಕಾರದ ದಾಖಲೆಯಲ್ಲಿ ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಮನೆ ಹಾನಿಗೆ ಜೂನ್ ೧ರಿಂದ ಜುಲೈ ೩೧ರ ವರೆಗೆ ೪೧೪ ಮನೆಗಳು ಹಾನಿಗೊಂಡಿದ್ದು, ೨೫೫ ಮನೆಗಳು ಭಾಗಶಃ ಹಾನಿಗೀಡಾಗಿವೆ. ಇದೂವರೆಗೆ ₹೬.೧೪ ಲಕ್ಷ ಮಾತ್ರ ಪರಿಹಾರ ನೀಡಲಾಗಿದೆ. ೧೧೫ ಮನೆಗಳ ತಿರಸ್ಕರಿಸಲಾಗಿದೆ.---
ಬಾಕ್ಸ್ಮುಳುಗಡೆ ಸಂತ್ರಸ್ತರಿಗೆ ಯಾವುದೇ ಸಮಸ್ಯೆಯಾಗದಂತೆ ರಬಕವಿ ನದಿತಟದ, ತಮದಡ್ಡಿ, ಆಸ್ಕಿ, ಕುಲಹಳ್ಳಿ, ಹಿಪ್ಪರಗಿ ಪ್ರದೇಶಗಳ ರೈತರಿಗೆ ಮೊದಲೇ ಸಭೆ ನಡೆಸಿ ಮುನ್ನೆಚ್ಚರಿಕೆ ನೀಡಲಾಗಿತ್ತಲ್ಲದೇ ಅಗತ್ಯವಿದ್ದಲ್ಲಿ ಕಾಳಜಿಕೇಂದ್ರಗಳನ್ನು ಆರಂಭಿಸುವ ಜೊತೆಗೆ ಜಾನುವಾರುಗಳ ಸಂಖ್ಯೆ ಆಧರಿಸಿ ಮೇವು ವಿತರಿಸಲಾಗುತ್ತಿದೆ. ಕೃಷ್ಣಾ ಸಂತ್ರಸ್ತರಿಗೆ ಹಳಿಂಗಳಿಯ ೪೦ ಕುಟುಂಬಗಳ ೧೭೫ ಜನ, ೨೦೮ ಜಾನುವಾರುಗಳು, ತಮದಡ್ಡಿಯ ೨೩ಕುಟುಂಬಗಳ ೯೩ ಜನ, ೮೯ ಜಾನುವಾರು, ಆಸ್ಕಿಯ ೮ಕುಟುಂಬಗಳ ೩೦ ಜನ, ೫೦ ಜಾನುವಾರುಗಳು, ಕುಲಹಳ್ಳಿಯ ೨೯ ಕುಟುಂಬಗಳ ೧೬೧ ಜನ, ೩೯೦ ಜಾನುವಾರು, ಹಿಪ್ಪರಗಿಯ ೪೦ ಕುಟುಂಬಗಳ ೧೬೪ ಜನ, ೧೨೮೦ ಜಾನುವಾರುಗಳಿಗೆ ಕಾಳಜಿ ಕೇಂದ್ರಗಳಲ್ಲಿ ಉಪಾಹಾರ, ಊಟ ಮತ್ತು ಜಾನುವಾರುಗಳಿಗೆ ಮೇವು ಪೂರೈಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಿಗಾಗಿರುವ ಹಾನಿ ಪ್ರವಾಹ ಇಳಿಕೆ ಬಳಿಕ ನಿಖರವಾಗಿ ದೊರೆಯುವುದರಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
-ಶ್ವೇತಾ ಬೀಡಿಕರ. ಉಪವಿಭಾಗಾಧಿಕಾರಿಗಳು, ಜಮಖಂಡಿ.----
ರಬಕವಿ ನಗರದ ಹೊಸಪೇಟ ಲೇನ್, ಮುತ್ತೂರ ಗಲ್ಲಿ, ಕಡಾಲಕಟ್ಟಿ, ಯಾತಗೇರಿ, ಮಟ್ಟಿಕಲ್ಲಿ ಲೇನ್ ಪ್ರದೇಶಗಳ ಜನತೆಯ ಕಣ್ಣು ಸ್ಥಿರವಾಗಿರುವ ಕೃಷ್ಣೆಯ ಹಿನ್ನೀರಿನ ಮೇಲೆಯೇ ಕೇಂದ್ರೀಕೃತವಾಗಿದ್ದು, ಮಹಾ ಮಳೆಗೆ ನದಿಗೆ ನೀರು ಬಂದಲ್ಲಿ ಮತ್ತೆ ೨೦೧೯ ಮತ್ತು ೨೦೨೧ರ ಮುಳುಗಡೆ ಗುಮ್ಮ ಕಾಡುತ್ತಿದೆ. ಈಗಾಗಲೇ ಸ್ಲಂ ಪ್ರದೇಶವೆಂದು ಘೋಷಿತ ಪ್ರದೇಶಗಳ ಜನತೆಗೆ ಪುನರ್ವಸತಿ ಕಲ್ಪಿಸಿ.-ಪ್ರಕಾಶ ಬೀಳಗಿ, ನೀಲಕಂಠ ಮುತ್ತೂರ, ಗಜಾನನ ತೆಗ್ಗಿ ಹೋರಾಟ ಸಮೀತಿ ಧುರೀಣರು.