ರಾಜ್ಯದಲ್ಲಿ ಮತ್ತು ಜಿಲ್ಲೆಯ ಗಡಿ ಭಾಗ ಹಾಗೂ ಹೆದ್ದಾರಿಗಳಲ್ಲಿ ಎಲ್ಲಾ ಬಾರ್‌ಗಳಿಗೂ ಪರ್ಮಿಷನ್ ಇದೆ. ಆದರೆ ಕಾಫಿ ಬಾರ್ ಅನ್ನುತ್ತಾರೆ. ಇಲ್ಲಿ ಮಾರುವುದು ಮಾತ್ರ ವೈನ್ಸ್. ಇಂದು ಯುವಕರು ಹಾಳಾಗುತ್ತಿದ್ದಾರೆ ಮತ್ತು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ನೇರ ಕಾರಣ ಪ್ರಮುಖವಾಗಿ ರಾಜ್ಯ ಸರ್ಕಾರ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕಡೆ ಅನ್ನ ಭಾಗ್ಯ ನೀಡುತ್ತೇವೆ ಎಂದು ಮತ್ತೊಂದಡೆ ಆಲ್ಕೋಹಾಲ್ ಭಾಗ್ಯ ನೀಡಿ ಯುವಕರನ್ನು ಮದ್ಯ ವ್ಯಸನಿಗಳನ್ನಾಗಿ ಮಾಡುತ್ತಿದೆ. ಇದು ಯಾವ ನ್ಯಾಯ ಎಂದು ಸಂಸದ ಡಾ.ಕೆ. ಸುಧಾಕರ್ ಕಿಡಿಕಾರಿದ್ದಾರೆ.

ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಗರಿಕರಿಂದ ಅಹವಾಲು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮತ್ತು ಜಿಲ್ಲೆಯ ಗಡಿ ಭಾಗ ಹಾಗೂ ಹೆದ್ದಾರಿಗಳಲ್ಲಿ ಎಲ್ಲಾ ಬಾರ್‌ಗಳಿಗೂ ಪರ್ಮಿಷನ್ ಇದೆ. ಆದರೆ ಕಾಫಿ ಬಾರ್ ಅನ್ನುತ್ತಾರೆ. ಇಲ್ಲಿ ಮಾರುವುದು ಮಾತ್ರ ವೈನ್ಸ್. ಇಂದು ಯುವಕರು ಹಾಳಾಗುತ್ತಿದ್ದಾರೆ ಮತ್ತು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ನೇರ ಕಾರಣ ಪ್ರಮುಖವಾಗಿ ರಾಜ್ಯ ಸರ್ಕಾರದ ಆಡಳಿತ. ಕುಡಿಯುವುದು ಶ್ರೀಮಂತರಲ್ಲಾ. ಶ್ರೀಮಂತರು ಕುಡಿಯುವುದು ಗುಣಮಟ್ಟದ ಮದ್ಯ. ಆದರೆ ಶ್ರಮಿಕ ವರ್ಗದ ಜನ ಹಾಗೂ ಯುವಜನತೆ ಮಾತ್ರ ಕಳಪೆ ಮದ್ಯ ಕುಡಿಯುತ್ತಿದ್ದಾರೆ. ಇದರಿಂದ ಆರ್ಥಿಕ ಸಾಮಾಜಿಕ ಆರೋಗ್ಯ ಹಾಳಾಗುತ್ತಿದೆ ಎಂದರು.

ಇಂದಿನ ಯುವಕರು 40 ರಿಂದ 45 ವರ್ಷಗಳನ್ನು ಸಹ ದಾಟುತ್ತಿಲ್ಲ. ಇಂದು ರಾಜ್ಯದಲ್ಲಿ ಯುವಕರ ಜೀವನ ಬಹಳ ಮಂಕಾಗುತ್ತಿದೆ. ಅದರ ಹೊಣೆ ರಾಜ್ಯ ಸರ್ಕಾರದ್ದೇ ಆಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಬರಬಹುದು ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

ಡ್ರಗ್ಸ್‌ ದಂಧೆಗೆ ಖಾಕಿ ಆಶೀರ್ವಾದ:

ಮೊನ್ನೆ ಪೊಲೀಸರ ಮೇಲೆ ವಿದ್ಯಾರ್ಥಿಗಳಿಂದ ನಡೆದ ಹಲ್ಲೆಗೆ ಪೊಲೀಸರೇ ಕಾರಣ. ಯುವಕರು ಮಾದಕ ವಸ್ತು ಅಥವಾ ಮದ್ಯ ಸೇವಿಸಿ ಹಲ್ಲೆ ನಡೆಸುವ ಮಟ್ಟಕ್ಕೆ ಹೋಗಿದ್ದಾರೆಂದರೆ ಅವರ ಮಾದಕ ವ್ಯಸನಕ್ಕೆ ಮೊದಲನೇ ಕಾರಣ ಇಡೀ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸರು. ನಾನು ಪ್ರತಿ ದಿಶಾ ಸಭೆಯಲ್ಲಿ ಮಾದಕ ವಸ್ತುಗಳ ಪೂರೈಕೆ ಬಗ್ಗೆ ಪ್ರಸ್ತಾಪಿಸುತ್ತೇನೆ. ಇಡೀ ರಾಜ್ಯದಲ್ಲಿ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದಕ ವಸ್ತುಗಳು ಸುಲಭವಾಗಿ, ಹೇರಳವಾಗಿ ಸಿಗುತ್ತಿವೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇದೆ. ಮಾದಕ ವಸ್ತು ಪೂರೈಕೆದಾರರಿಗೆ ಪೊಲೀಸರ ಆಶೀರ್ವಾದವಿದೆ. ಇವರೆಲ್ಲಾ ಶಾಮೀಲಾಗದೆ ಇಷ್ಟು ದೊಡ್ಡ ಮಟ್ಟದಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಯೊಳಗೆ ಮಾದಕ ವಸ್ತುಗಳು ಪ್ರವೇಶಿಸಲ್ಲ ಎಂದು ಆರೋಪಿಸಿದರು.

ಲೂಟಿಗೆ ನಿಂತಿದೆ ಸರ್ಕಾರ:

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತಿಲ್ಲ. ಏಕೆಂದರೆ ಪ್ರಜಾಪ್ರಭುತ್ವದ ನೀತಿ ಅನುಸರಿಸುತ್ತಿಲ್ಲ. ಜನಪ್ರತಿನಿಧಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಸರ್ಕಾರದಲ್ಲಿ ಇರುವವರು ಎಷ್ಟೆಷ್ಟು ಹಣ ಹೆಚ್ಚು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಬಿಟ್ಟರೆ, ರೈತರು, ಕೂಲಿ ಕಾರ್ಮಿಕರು, ಶ್ರಮಿಕರ ಜೀವನ ಮಟ್ಟ ಅಭಿವೃದ್ಧಿ ಮಾಡುವಂತಹ ಬದ್ಧತೆ, ಚಿಂತನೆ ಯಾವುದು ಇಲ್ಲ. ಮೊದಲ ಮೂರು ವರ್ಷ ಕುರ್ಚಿ ಕಿತ್ತಾಟದಲ್ಲಿ ಕಾಲಹರಣವಾಯಿತು, ಉಳಿದ ಈ ಎರಡು ವರ್ಷಗಳಲ್ಲಿ ಎಷ್ಟು ಸಂಪತ್ತನ್ನು ಲೂಟಿ ಮಾಡುತ್ತೇವೆ. ಅಷ್ಟು ಮಾಡಿಕೊಂಡರೆ ಸಾಕು ಎಂಬುದು ಇವರ ಮನಸ್ಥಿತಿಯಾಗಿದೆ. ಯಾವಾಗ ರಾಜಕಾರಣಿ ಎಷ್ಟು ಪಟ್ಟು ಮಾಡುತ್ತಾನೋ ಅದರ ಎರಡು ಪಟ್ಟು ಅಧಿಕಾರಿ ಮಾಡುತ್ತಾನೆ. ಸಣ್ಣ ಮಟ್ಟದ ಕಾನ್‌ಸ್ಟೇಬಲ್ ನಿಂದ ದೊಡ್ಡಮಟ್ಟದ ಅಧಿಕಾರಿಯವರೆಗೆ ವರ್ಗಾವಣೆ ಆಗಬೇಕಾದರೆ ಕೋಟ್ಯಂತರ ರು.ಗಳನ್ನು ನೀಡುತ್ತಾನೆ. ಭ್ರಷ್ಟಾಚಾರವಿಲ್ಲದೆ ಯಾವುದೇ ಕೆಲಸ ಈ ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಚಿನ್ನ ಕೊಳ್ಳುವುದನ್ನು ಒಂದು ವರ್ಷ ಮುಂದೂಡುವಂತೆ, ಪೆಟ್ರೋಲ್, ಡೀಸೆಲ್ ಅಡುಗೆ ತೈಲ ಮತ್ತು ಗ್ಯಾಸ್ ಗಳನ್ನು ಕಡಿಮೆ ಬಳಸುವಂತೆ ತಿಳಿಸಿದ್ದಾರೆ. ಯುದ್ಧ ಪ್ರಾರಂಭವಾದಾಗಿನಿಂದ ನಮ್ಮ ತೈಲ ಕಂಪೆನಿಗಳು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿವೆ. ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ಬೆಲೆ ಹೆಚ್ಚಾದರೂ ನಮ್ಮ ದೇಶದಲ್ಲಿ ಬೆಲೆ ಹೆಚ್ಚು ಮಾಡದೆ ಅದೇ ಹಳೆಯ ಮೌಲ್ಯಕ್ಕೆ ಕೊಡುತ್ತಿರುವುದರಿಂದ ಈ ನಷ್ಟ ಸಂಭವಿಸಿದೆ. ಇದು ಸರ್ಕಾರಕ್ಕೆ ಆದ ನಷ್ಟ. 140 ಕೋಟಿ ಜನರೇ ಕೇಂದ್ರ ಸರ್ಕಾರವಾಗಿದ್ದಾರೆ. ಅಂದರೆ ಜನತೆಗೆ ಆದ ನಷ್ಟ. ಸಾಧ್ಯವಾದಷ್ಟು ನಷ್ಟ ತಪ್ಪಿಸಲು ಉಳಿತಾಯ ಮಾಡಿ ಎಂದು ಹೇಳಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಅನೇಕರಿಂದ ಅಹವಾಲುಗಳನ್ನು ಸ್ವೀಕರಿಸಿದ್ದು ಅವುಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಸಂಸದರು ಹೇಳಿದರು,

ಸಿಕೆಬಿ-3

ಜನ ಸ್ಪಂದನ ಕಾರ್ಯಕ್ರಮದಲ್ಲಿ ವಿಶೇಷ ಚೇತನರೊಬ್ಬರಿಂದ ಸಂಸದ ಡಾ.ಕೆ. ಸುಧಾಕರ್ ಅಹವಾಲು ಪಡೆದರು.