ಬರ ಎದುರಿಸಲು ಸರ್ಕಾರ ಸನ್ನದ್ಧ: ಸಚಿವ ಕೆ.ಜೆ.ಜಾರ್ಜ್

| Published : Nov 30 2023, 01:15 AM IST

ಸಾರಾಂಶ

ಬರ ಎದುರಿಸಲು ಸರ್ಕಾರ ಸನ್ನದ್ಧ: ಸಚಿವ ಕೆ.ಜೆ.ಜಾರ್ಜ್ಕಡೂರು, ಚಿಕ್ಕಮಗಳೂರು ತಾಲೂಕಿನ ಪ್ರದೇಶಗಳಿಗೆ ಭೇಟಿ

ಕಡೂರು, ಚಿಕ್ಕಮಗಳೂರು ತಾಲೂಕಿನ ಪ್ರದೇಶಗಳಿಗೆ ಭೇಟಿ : ಕಡೂರು ತಾಪಂ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ, ಕಡೂರು

ಜನ ಜಾನುವಾರುಗಳಿಗೆ ತೊಂದರೆ ಆಗದಂತೆ ಬರ ಎದುರಿಸಲು ಸರ್ಕಾರ ಸಜ್ಜಾಗಿದ್ದು, ಸಂಭಂಧಿಸಿದ ಇಲಾಖೆಗಳ ಮುಖ್ಯಸ್ಥರು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಆದೇಶಿಸಿದರು.

ಬುಧವಾರ ಅವರು ಶಾಸಕರಾದ ಕೆ.ಎಸ್‌. ಆನಂದ್ , ಎಚ್ ಡಿ ತಮ್ಮಯ್ಯ, ಜೆ.ಎಚ್ .ಶ್ರೀನಿವಾಸ್ ಮತ್ತು ಕೃಷಿ, ತೋಟಗಾರಿಕೆ, ಕಂದಾಯ ಹಾಗು ನೀರಾವರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬೆಳೆ ಹಾನಿಯಾದ ಕಡೂರು ತಾಲೂಕಿನ ಬ್ರಹ್ಮಸಮುದ್ರ, ರಾಮನಹಳ್ಳಿ, ಲಕ್ಷ್ಮಿಪುರ, ಅಜ್ಜಂಪುರದ ತ್ಯಾರಜನ ಹಳ್ಳಿ ಮತ್ತು ತರೀಕೆರೆ, ಚಿಕ್ಕಮಗಳೂರು ತಾಲೂಕಿನ ಪ್ರದೇಶಗಳಿಗೆ ಭೇಟಿ ಬಳಿಕ ಕಡೂರು ತಾಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳಿಂದ ಬೆಳೆ ಹಾನಿಗೆ ಈಡಾಗಿರುವ ಪ್ರದೇಶಗಳ ಕುರಿತು ಮಾಹಿತಿ ಪಡೆದ ಅವರು. ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರು ಗಳಿಗೆ ತೊಂದರೆ ಆಗದಂತೆ, ಮೇವು ನೀಡಿಕೆಗೆ ಪಶು ವೈದ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಬಾರದು ಎಂದು ಎಚ್ಚರಿಕೆ ನೀಡಿದರು.

ತೋಟಗಾರಿಕಾ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿ ಮಾರ್ಚ್ ನಿಂದ ಸಕಾಲಕ್ಕೆ ಮಳೆ ಬಾರದೆ ಶೇ 23 ರಷ್ಟು ಮಾತ್ರ ಮಳೆಯಾಗಿ ಈ ಪ್ರದೇಶದ 44,924, ಹೆಕ್ಟೇರ್ ನಲ್ಲಿ ವಿವಿಧ ಬೆಳೆಗಳು ನಾಶವಾದ ಬಗ್ಗೆ ಸರಕಾರಕ್ಕೆ ವರದಿ ಮಾಡಲಾಗಿದೆ ಎಂದರು.

ಮಲೆನಾಡಿನಲ್ಲಿ 8,645.ಹೆಕ್ಟೇರ್‌ನಲ್ಲಿ ಬೆಳೆದ ಭತ್ತ, ಮೆಕ್ಕೆಜೋಳ 6,475 ಹೆ. 846 ಹೆ. ಹತ್ತಿ , ಶೇಂಗಾ 1470 ಹೆ., 5056 ಹೆ. ನಲ್ಲಿ ಈರುಳ್ಳಿ , ಆಲೂಗಡ್ಡೆ 1458 ಹೆ. ಹಾಳಾಗಿದೆ ಒಟ್ಟು 7058 ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ ಎಂದು ವಿವರಿಸಿದರು.

ಕಡೂರಲ್ಲಿ 5020 ಜನ ಬೆಳೆ ಹಾನಿ ನೋಂದಣಿ ಮಾಡಿದ್ದು ತಂತ್ರಾಂಶದಲ್ಲಿ ಕಡೂರಿನಲ್ಲಿ 3924 ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಜ್ಜಂಪುರದಲ್ಲಿ 364, ತರೀಕೆರೆಯಲ್ಲಿ 59 ಎಕರೆ ಬೆಳೆ ವಿಮೆ ನೋಂದಣಿ ಸೇರಿದಂತೆ ಒಟ್ಟಾರೆ 60 ಕೋಟಿ ರು. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಸಚಿವರು ಜಿಲ್ಲೆಯ ಬರಪೀಡಿತ ತಾಲೂಕುಗಳ ಸಮಸ್ಯೆ ನಿವಾರಿಸಲು ಜಿಲ್ಲಾ ಆಡಳಿತ ಮತ್ತು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಹೇಳಿದರು.

ಬೆಳೆ ಹಾನಿ ಪರಿಹಾರಕ್ಕೆ 60 ಕೋಟಿ ಅಂದಾಜು ವೆಚ್ಚವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದಾಗ ಶಾಸಕ ಕೆ.ಎಸ್.ಆನಂದ್ ಇನ್ನು ನೋಂದಣೆ ಪ್ರಕ್ರಿಯೆ ಮುಂದುವರೆದಿದೆ. ಈಗಾಗಲೇ ಅಂದಾಜು ಪಟ್ಟಿ ಕಳುಹಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೂಡಲೆ ಬೆಳೆಹಾನಿ ನೋಂದಣಿ ಚುರುಕುಗೊಳಿಸಬೇಕೆಂದು ಸೂಚಿಸಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ ಜಾನುವಾರುಗಳಿಗೆ ಮುಂದಿನ ಮಳೆಗಾಲದ ತನಕ ಮೇವಿಗೆ ಮಾಡಿರುವ ವ್ಯವಸ್ಥೆ ಏನು ಎಂದಾಗ. ಅಧಿಕಾರಿಗಳಿಂದ ಉತ್ತರ ಬಾರದ ಕಾರಣ ಅಮೃತ್ ಮಹಲ್ ನ ಕೆಲವು ಭಾಗಗಳ ಭೂಮಿಯಲ್ಲಿ ಮೇವನ್ನು ಬೆಳೆಯಲು ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ 3 ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಎಲ್ಲೆಲ್ಲಿ ಇದೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗದೆ ಶಾಸಕರು ಗರಂ ಆದರು. ತರೀಕೆರೆ ಶಾಸಕರು ಸಹ ನಮ್ಮಲ್ಲಿಯೂ ಕೆಲವೆಡೆ ಸಮಸ್ಯೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸಚಿವರು ಕೂಡಲೆ ಸಂಬಂಧಿಸಿದ ಎಂಜಿನಿಯರ್ ಮೂಲಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದರು.

ಕುಡಿವ ನೀರಿನ 1 ಕೋಟಿ ಅನುದಾನದಲ್ಲಿ ಈಗಾಗಲೇ ಕಡೂರು ಕ್ಷೇತ್ರಕ್ಕೆ 43 ಲಕ್ಷ ವೆಚ್ಚ ಮಾಡಿದ್ದು, 1.64 ಕೋಟಿ ರು. ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ನೀರಾವರಿ ಇಂಜಿನಿಯರ್ ಹೇಳಿದರು.

ಕುರಿಯುವ ನೀರಿಗೆ ಸಮಸ್ಯೆಯಾಗದಂತೆ ಟಿಸಿಗಳನ್ನು ಕೂಡಲೆ ಆಳವಡಿಸಿ ಮೆಸ್ಕಾಂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ತರೀಕೆರೆ ಉಪ ವಿಭಾಗಧಿಕಾರಿ ಡಾ.ಕಾಂತರಾಜು, ಡಿವೈಎಸ್ಪಿ ಹಾಲಮೂರ್ತಿರಾವ್ ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು. ---ಬಾಕ್ಸ್ ಸುದ್ದಿ ---

ಆಂಬುಲೆನ್ಸ್‌ಗೆ ಕೂಡಲೇ ವ್ಯವಸ್ಥೆ

ಕಡೂರು ಕ್ಷೇತ್ರಕ್ಕೆ ಇಂಧನ ಸಚಿವರು ಒಂದು ಆಂಬುಲೆನ್ಸ್‌ ನೀಡುವುದಾಗಿ ಕಳೆದ 4 ತಿಂಗಳ ಹಿಂದೆಯೇ ತಿಳಿಸಿದ್ದ ವಿಷಯ ಪತ್ರಕರ್ತರು ನೆನಪಿಸಿದಾಗ ಕೂಡಲೆ ವ್ಯವಸ್ಥೆ ಮಾಡಲಾಗುತ್ತದೆ ಎಂದ ಸಚಿವರು ಸರ್ಕಾರದಿಂದಲೂ ಆಂಬುಲೆನ್ಸ್‌ ನೀಡಲಿದ್ದೇವೆ ಎಂದರು.

ತಾಲೂಕಿನ ಪಂಚನಹಳ್ಳಿ, ಯಗಟಿಗೆ ಭೇಟಿ ನೀಡದೆ ರಾಮನಹಳ್ಳಿಗೆ ಭೇಟಿ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಕೆ.ಎಸ್.ಆನಂದ್ , ಪಂಚನಹಳ್ಳಿ ಭಾಗಗಳಿಗಿಂತ ಕ್ಷೇತ್ರದ ರಾಮನಹಳ್ಳಿ ಭಾಗದಲ್ಲಿ ಅತಿಹೆಚ್ಚು ಬೆಳೆಹಾನಿಯಾಗಿದೆ ಎಂಬ ಮಾಹಿತಿ ನೀಡಿದರು. 29ಕೆಕೆಡಿಯು2..

ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಬರ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಾಸಕರು, ಅಧಿಕಾರಿಗಳು ಇದ್ದರು.

29ಕೆಕೆಡಿಯು2ಎ.

ಕಡೂರಿನ ಬ್ರಹ್ಮ ಸಮುದ್ರ, ರಾಮನಹಳ್ಳಿ ಮತ್ತಿತರ ಕಡೆ ಸಚಿವ ಕೆ.ಜೆ. ಜಾಜ್ ಶಾಸಕರೊಂದಿಗೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು.