ಸರ್ಕಾರ ನೀಡಿರುವ ಭರವಸೆಯಂತೆ ಜಿಲ್ಲೆಯ ಎಲ್ಲಾ ನಾಲೆಗಳಿಗೆ ಈಗಿನಿಂದಲೇ ನೀರು ಹರಿಸಲಾಗಿದೆ, ರೈತರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ನಂತರ ಪ್ರತಿಭಟನೆ ಧರಣಿ ನಿರತ ರೈತ ಸಂಘಟನೆಗಳು ನಾಲೆಗಳಿಗೆ ನೀರು ಹರಿಸಿರುವ ಬಗ್ಗೆ ಖಚಿತ ಪಡಿಸಿಕೊಂಡು ಆಹೋರಾತ್ರಿ ಪ್ರತಿಭಟನಾ ಧರಣಿ ಕೈ ಬಿಟ್ಟಿದ್ದಾರೆ. ಅಂತೂ ಹೋರಾಟಕ್ಕೆ ಜಯವಾಗಿದೆ ಎಂದು ರೈತರು ಹಾಗೂ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘಟನೆ ಸೇರಿದಂತೆ ಇತರೆ ಸಂಘಟನೆಗಳು ನಡೆಸಿದ ಪ್ರತಿಭಟನಾ ಧರಣಿಗಳಿಗೆ ಸರ್ಕಾರ ಹಾಗೂ ನೀರಾವರಿ ಇಲಾಖೆ ಮಣಿದು ಜಿಲ್ಲೆಯ ಎಲ್ಲಾ ನಾಲೆಗಳಿಗೆ ಗುರುವಾರ ಸಂಜೆಯಿಂದ ನೀರು ಹರಿಸಿದೆ.

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ ಜೊತೆಗೆ ಮಳೆ ಇಲ್ಲದೆ ಬೇಸಿಗೆ ಬಿಸಿಲಿಗೆ ನೀರಿಲ್ಲದೆ ಕಟಾವಿನ ಹಂತದಲ್ಲಿರುವ ಕಬ್ಬು, ತೆಂಗು, ಅಡಿಕೆ ಬಾಳೆ ಸೇರಿದಂತೆ ಇತರ ಬೆಳೆಗಳು ಬಾಡಿ ಹೋಗುತ್ತಿದ್ದು, ಕಬ್ಬು ಸಂಪೂರ್ಣ ನೀರಿಲ್ಲದೆ ಸುಳಿಯವರೆಗೂ ಒಣಗಿ ಬೆಂಡಾದಂತೆ ಕಂಡು ಬಂದಿದೆ. ಇದರಿಂದ ಜಿಲ್ಲೆಯ ರೈತ ಪರ ಸಂಘಟನೆಗಳು ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಭಟನಾ ಧರಣಿಗಳನ್ನು ನಡೆಸಿದ್ದವು.

ಅಲ್ಲದೆ ಕೆಆರ್‌ಎಸ್ ಜಲಾಶಯದ ನೀರಾವರಿ ಕಚೇರಿ ಬಳಿ ಜಿಲ್ಲೆಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ರೈತರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಾಲೆಗಳಿಗೆ ನೀರು ಹರಿಸುವವರೆಗೂ ಪ್ರತಿಭಟನೆ ಬಿಡುವುದಿಲ್ಲ ಎಂದು ಪಣ ತೊಟ್ಟು ಮೂರು ದಿನಗಳಿಂದ ಆಹೋರಾತ್ರಿ ಧರಣಿಯನ್ನು ನಡೆಸಿದ್ದರು.

ಭೂಮಿತಾಯಿ ಹೋರಾಟ ಸಮಿತಿಯ ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಸ್ನಾನಘಟ್ಟದ ಬಳಿ ಕಾವೇರಿ ನದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ, ಒಣಗಿದ್ದ ಕಬ್ಬಿನ ಜೊಲ್ಲೆಗಳ ಹಿಡಿದು ಅರೆ ಬೆತ್ತಲೆ ಪ್ರದರ್ಶನ, ತಾಲೂಕು ಕಚೇರಿ ಮುಂದೆ ಧರಣಿ, ರಸ್ತೆ ತಡೆ ಪ್ರತಿಭಟನೆ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ತೀವ್ರವಾಗಿ ಹೋರಾಟ ನಡೆಸಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆ ಕೈ ಬಿಟ್ಟ ಸಂಘಟನೆ:

ಸರ್ಕಾರ ನೀಡಿರುವ ಭರವಸೆಯಂತೆ ಜಿಲ್ಲೆಯ ಎಲ್ಲಾ ನಾಲೆಗಳಿಗೆ ಈಗಿನಿಂದಲೇ ನೀರು ಹರಿಸಲಾಗಿದೆ, ರೈತರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ನಂತರ ಪ್ರತಿಭಟನೆ ಧರಣಿ ನಿರತ ರೈತ ಸಂಘಟನೆಗಳು ನಾಲೆಗಳಿಗೆ ನೀರು ಹರಿಸಿರುವ ಬಗ್ಗೆ ಖಚಿತ ಪಡಿಸಿಕೊಂಡು ಆಹೋರಾತ್ರಿ ಪ್ರತಿಭಟನಾ ಧರಣಿ ಕೈ ಬಿಟ್ಟಿದ್ದಾರೆ. ಅಂತೂ ಹೋರಾಟಕ್ಕೆ ಜಯವಾಗಿದೆ ಎಂದು ರೈತರು ಹಾಗೂ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಣಗಿದ್ದ ಎಲ್ಲಾ ಬೆಳೆಗಳಿಗೆ ಪರಿಹಾರ ನೀಡಿ:

ಸುಮಾರು 50 ದಿನಗಳ ನಂತರ ಒಲ್ಲದ ಮನಸಿನಿಂದ ರಾಜ್ಯ ಸರ್ಕಾರ ಒಣಗಿದ್ದ ಬೆಳೆಗಳ ಕಾಪಾಡಲು ನೀರು ಹರಿಸಿದೆ. ಗುತ್ತಿಗೆದಾರರ ಹಿತಕ್ಕೆ, ಅವರಿಂದ ಬರುವ ಕಮಿಷನ್ ಆಸೆಗೆ ನಾಲೆ ದುರಸ್ತಿ ಕಾರ್ಯದ ನಾಟಕವಾಡಿದ್ದು, ರೈತ ಕುಲಕ್ಕೆ ಧಕ್ಕೆಯಾಗಿದೆ. ಕಳೆದ 50 ದಿನಗಳಿಂದ ನೀರು ಬಿಡದೆ ಒಣಗಿದ ಕಬ್ಬು, ಇತರೆ ಬೆಳೆಗೆ ಪರಿಹಾರ ಕೊಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಈಗಾಗಲೇ ತೆಗೆದುಕೊಂಡಿರುವ ಸಮಯ ಸಾಕು. ನಿಜವಾದ ಜನರ ಪ್ರತಿನಿಧಿಗಳಾಗಿದ್ದರೆ ಮೊದಲು ಒಣಗಿದ ಎಲ್ಲಾ ಬೆಳೆಗಳಿಗೆ ಪರಿಹಾರ ಕೊಡಿಸುವ ಮೂಲಕ ರೈತರ ನೆರವಿಗೆ ಬನ್ನಿ.

ಕೆ.ಎಸ್.ನಂಜುಂಡೇಗೌಡ, ಭೂಮಿತಾಯಿಹೊರಟ ಸಮಿತಿ