ಸಾರಾಂಶ
ಶಿವಮೊಗ್ಗ : ಮೈಸೂರು ಮಾದರಿಯಲ್ಲೇ ನಡೆದುಕೊಂಡು ಬರುತ್ತಿರುವ ಶಿವಮೊಗ್ಗ ದಸರಾ ವೈಭವವ ಈ ಬಾರಿ ಇನ್ನಷ್ಟು ಹೆಚ್ಚಾಗಲಿದ್ದು, ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಕೂಡ ಸ್ಪಂದಿಸಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ದಸರಾವನ್ನು ಈ ಬಾರಿಯೂ ಕೂಡ ಅತ್ಯಂತ ವಿಜೃಂಭಣೆ ಯಿಂದ ಆಚರಿಸುವ ತೀರ್ಮಾನ ಮಾಡಲಾಗಿದ್ದು, ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರೊಂದಿಗೆ ಸಿಎಂ ಭೇಟಿ ಮಾಡಿ ಪ್ರಸ್ತಾಪ ಮಾಡಿದ್ದೇವೆ. ದಸರಾ ಆಚರಣೆಗೆ 2 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸಹ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಶಿವಮೊಗ್ಗ ದಸರಾ ಆಚರಣೆಗೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಈ ಬಾರಿ ಅದ್ಧೂರಿ ದಸರಾ ಆಚರಣೆ ನಡೆಯುತ್ತೆ, ಅಂಬಾರಿ ದಸರಾ ಸಹ ಈ ಸಲ ನಡೆಯುತ್ತೆ ರಾಜ್ಯದಲ್ಲೇ ಎರಡನೇ ಅದ್ಧೂರಿ ದಸರಾ ಆಚರಣೆ ನಮ್ಮಲ್ಲಿ ನಡೆ ಯುತ್ತೆ ಎಂದರು.
ಪಾಲಿಕೆಯಲ್ಲಿ ಈಗಾಗಲೇ 1.5 ಕೋಟಿ ರು. ಹಣವಿದೆ, ಇದರ ಜೊತೆಗೆ ಸರ್ಕಾರ ಕೊಡುವ ಹಣವನ್ನೂ ಸೇರಿಸಿ ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಈಗಾಗಲೇ 14 ಸಮಿತಿಗಳು ಸಹ ಪಾಲಿಕೆ ಆಯುಕ್ತರು ಮಾಡಿದ್ದಾರೆ ಎಂದರಲ್ಲದೇ, ಸಕ್ರೆಬೈಲು ಆನೆ ಬಿಡಾರದಿಂದ ಆನೆ ಕಳಿಸಲು ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇವೆ. ಈ ಬಾರಿ ಹೆಣ್ಣು ಆನೆಗಳು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುಲು ಸಾಧ್ಯವಾಗದ ಕಾರಣ, ಮೂರು ಗಂಡು ಆನೆಗಳು ಈ ಬಾರಿಯ ದಸರಾದಲ್ಲಿ ಭಾಗಿ ಆಗಲಿವೆ. ಗಮಕ ದಸರಾ, ಪೌರ ಕಾರ್ಮಿಕರ ದಸರಾ, ಪತ್ರಕರ್ತರ ದಸರಾ ಮಾಡಲು ಕೂಡ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜ್ಞಾನೇಶ್ವರ, ಮೋಹನ್ ರೆಡ್ಡಿ, ವಿಶ್ವನಾಥ್, ಪ್ರಭಾಕರ್, ಆಶಾ ಚನ್ನಬಸಪ್ಪ, ಸುರೇಖಾ ಮುರಳೀಧರ್, ಅನಿತಾ ರವಿಶಂಕರ್, ಕಿರಣ್ ಮಂಜುನಾಥ್ ನವಿಲೆ, ಸಂಗೀತ, ಶ್ರೀನಾಗ್ ಇದ್ದರು.ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ: ಸಿಎಂಗೆ ಅಭಿನಂದನೆ
ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸದನದಲ್ಲಿ ನಾನು ಮಾತಾಡಿದ್ದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರನ್ ಪತ್ನಿ ಯನ್ನು ಬೆಂಗಳೂರಿಗೆ ಕರೆಸಿ ಚೆಕ್ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಇನ್ನೂ ಎರಡ್ಮೂರು ದಿನದಲ್ಲಿ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ಕೊಡಲಾಗುತ್ತೆ, ಕುಟುಂಬದ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಲು ಸಹ ಮನವಿ ಮಾಡಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೂ ಸಹ ಕೃತಜ್ಞನೆ ಸಲ್ಲಿಸುತ್ತೇನೆ ಎಂದರು.