ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ನಿಯಮದ ಪ್ರಕಾರ ಅಧಿಕೃತ ಕಟ್ಟಡ ಹಾಗೂ ಜಾಗಕ್ಕೆ ಎ ಖಾತೆ ಮತ್ತು ಅನಧಿಕೃತ ಕಟ್ಟಡ-ಸ್ಥಳಕ್ಕೆ ಬಿ ಖಾತೆ ನೀಡಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಈ ಹೊಸ ನಿಯಮದಿಂದ ಮುಖ್ಯವಾಗಿ ಬಿ ಖಾತೆಯ ಸ್ಥಳಗಳನ್ನು ಮಾರಾಟ ಮಾಡಲು ಹಾಗೂ ಬ್ಯಾಂಕ್ ನಿಂದ ಸಾಲ ಪಡೆಯಲು ಅವಕಾಶ ಇದೆ. ನಿರಂತರವಾಗಿ ಎರಡುಪಟ್ಟು ತೆರಿಗೆಯ ಬದಲಿಗೆ ಏಕಕಾಲಕ್ಕೆ ಮಾತ್ರ ದುಪ್ಪಟ್ಟು ತೆರಿಗೆ ಪಾವತಿಸಲು ನಿಯಮದಲ್ಲಿ ಸರಳೀಕರಣ ಮಾಡಲಾಗಿದೆ ಎಂದು ನಗರಸಭೆಯ ಮಾಜಿ ಉಪಾಧ್ಯಕ್ಷ ಎಚ್.ಮಹಮ್ಮದ್ ಆಲಿ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಖಾತೆಯ ಸ್ಥಳ ಮಾರಾಟ ಮಾಡುವ ಅವಕಾಶ ಇದ್ದರೂ ಅದನ್ನು ಖರೀದಿ ಮಾಡುವವರಿಗೆ ಮನೆ ನಿರ್ಮಿಸಬೇಕಾದರೆ ಸಿಂಗಲ್ ಲೇಔಟ್ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಇಲ್ಲಿ ಒಂದಷ್ಟು ಗೊಂದಲ ಇದೆ. ಜನಸಾಮಾನ್ಯರು ಗೊಂದಲ ಮಾಡಿಕೊಳ್ಳದೆ ಸರಿಯಾದ ಮಾಹಿತಿ ಪಡೆದುಕೊಂಡ ಬಳಿಕವೇ ಇಂತಹ ಸ್ಥಳಗಳ ಖರೀದಿಗೆ ಮುಂದಾಗಬೇಕು. ಯಾಕೆಂದರೆ ಅನಧಿಕೃತ ಕಟ್ಟಡ ಮತ್ತು ಜಾಗ ಬಿ ಖಾತೆ ಪಡೆದುಕೊಂಡ ತಕ್ಷಣ ಅದು ಸಕ್ರಮ ಆಗುವುದಿಲ್ಲ. ಅನಧಿಕೃತ ಕಟ್ಟಡ-ಸ್ಥಳಗಳ ಬಿ ಖಾತೆಯನ್ನು ಕಾವೇರಿ ತಂತ್ರಾಂಶಕ್ಕೆ ಲಿಂಕ್ ಮಾಡುವ ಕಾರಣ ಸಾಲ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿದರೂ ಸಾಲ ಸಿಗುವುದು ಬ್ಯಾಂಕ್‌ಗಳ ವ್ಯವಸ್ಥೆಗೆ ಬಿಟ್ಟದ್ದಾಗಿದೆ. ಆದರೆ ಮಾರಾಟ ಮಾಡಲು ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.
ಕಟ್ ಕನ್ವರ್ಷನ್‌ಗೂ ಬಿ ಖಾತೆ:ಕಟ್ ಕನ್ವರ್ಷನ್‌ಗಳಿಗೆ ಬಿ ಖಾತೆ ನೀಡಲು ಅವಕಾಶ ಇದೆ. ಆದರೆ ಈ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಸಿಗಬೇಕಾದರೆ ಸಿಂಗಲ್ ಲೇಔಟ್ ಅನುಮೋದನೆಯಾಗಬೇಕು. ಇದಕ್ಕೆ ನಿಯಮಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಈ ಕಾಯಿದೆ ತರಲಾಗಿದೆ. ಅಕ್ರಮವನ್ನು ಸಕ್ರಮೀಕರಿಸುವ ಹಿನ್ನಲೆಯಿಂದ ಅಲ್ಲ ಎಂದು ಅವರು ತಿಳಿಸಿದರು.
೨೦೧೩ರಲ್ಲಿ ಕಟ್ಟಡಗಳನ್ನು ಸಕ್ರಮ ಮಾಡುವ ಕಾಯ್ದಿಗೆ ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿದೆ. ದಲ್ಲಾಳಿಗಳು ಜನರಲ್ಲಿ ಗೊಂದಲ ಏರ್ಪಡಿಸುವ ಮೂಲಕ ತಪ್ಪು ಎಳೆಯುತ್ತಿದ್ದಾರೆ. ಸಾರ್ವಜನಿಕರು ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬಾರದು ಮತ್ತು ಮಂಜೂರಾದ ನಕ್ಷೆಯಂತೆ ಕಟ್ಟದೆ ಸೆಟ್ ಬ್ಯಾಕ್ ಉಲ್ಲಂಘಿಸಿ ಕಟ್ಟಡ ಮಾಡುವುದರಿಂದ ಮುಂದೆ ಸಮಸ್ಯೆ ನಿಶ್ಟಿತ ಎಂದು ಅವರು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ನಗರ ಸಭೆ ಸದಸ್ಯ ಮಹಮ್ಮದ್ ರಿಯಾಜ್, ನಾಮ ನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ, ನಗರ ಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಇದ್ದರು.