ಬರಗಾಲ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಬರಗಾಲ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಆರೋಪಿಸಿದ್ದಾರೆ.ದೇವರಹಿಪ್ಪರಗಿ ಹಾಗೂ ತಾಳಿಕೋಟಿ ತಾಲೂಕಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮ ಖಂಡಿಸಿ ತಮ್ಮ ನೇತೃತ್ವದಲ್ಲಿ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಪಟ್ಟಣದ ಮೊಹರೆ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ವಾಸ್ತವ ನೈಜ ಸ್ಥಿತಿ ಪರಿಶೀಲಿಸಿ ದೇವರಹಿಪ್ಪರಗಿ ಹಾಗೂ ತಾಳಿಕೋಟೆ ಬರಪೀಡಿತ ತಾಲೂಕುಗಳು ಎಂದು ಘೋಷಿಸಬೇಕು. ಬೆಳೆಹಾನಿಗೆ ಸೂಕ್ತ ಪರಿಹಾರ, ಬರ ಪರಿಹಾರ ಕಾಮಗಾರಿಗಳಿಗೆ ಅನುದಾನ ಹಾಗೂ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ವರದಿಯಂತೆ ತಾಲೂಕುಗಳು ಬರಪಿಡಿತ ಪ್ರದೇಶಗಳಾಗಿವೆ. ಆದರೆ ಸರ್ಕಾರ ವಾಸ್ತವ ಅರಿಯದೆ ಜಿಲ್ಲೆಯ ಕೆಲವು ತಾಲೂಕುಗಳು ಬರಪಿಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇದರಿಂದ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.ಮುಖಂಡರಾದ ಶೇಖರಗೌಡ ಹಿರೇಗೌಡ, ಶ್ರೀಶೈಲ ಮುಳಜಿ, ಮುನೀರ್ ಅಹ್ಮದ್ ಮಳಖೇಡ ಹಾಗೂ ಸಾಯಿಬಣ್ಣ ಬಾಗೇವಾಡಿ ಮಾತನಾಡಿ, ಕ್ಷೇತ್ರದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ.ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸರ್ಕಾರ ರೈತರ ಸಾಲಮನ್ನಾ ಘೋಷಿಸಿ, ಪರಿಹಾರ ನೀಡಬೇಕು. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಸದಸ್ಯರಾದ ಕಾಸು ಗೌಡ ಜಲಕತ್ತಿ, ಶಾಂತಯ್ಯ ಜಡಿಮಠ, ಮುಖಂಡರಾದ ಸಂಗನಗೌಡ ಬಿರಾದಾರ, ಅಸ್ಕಿ ಗೌಡ್ರು, ಶೇಕರಗೌಡ ಪಾಟೀಲ, ಗುರುನಗೌಡ ಪಾಟೀಲ, ಅನಿಲಗೌಡ ಪಾಟೀಲ, ಚಂದ್ರುಗೌಡ ಪಾಟೀಲ, ಡಾ.ಆರ್.ಆರ್. ನಾಯಕ, ವೀರೇಶ ಕುದರಿ, ಇಕ್ಬಾಲ್ ಬಿಜಾಪುರ, ಅಜೀಜ್ ಮರೋಳ, ಹಣಮಂತ ತಾಂಬೆ ಸೇರಿ ರೈತ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.