ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರದ ದ್ವಂದ್ವ ನೀತಿ

| Published : Sep 26 2025, 01:00 AM IST

ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರದ ದ್ವಂದ್ವ ನೀತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹೇಶ್‌ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತ ಭಟ್, ವಿಠ್ಠಲಗೌಡ ಮತ್ತಿತರರಿದ್ದು ಇವರು ಆಡಿಸಿದಂತೆ ಹಣದ ಆಸೆಗಾಗಿ ಚಿನ್ನಯ್ಯ ಆಡಿದ್ದಾರೆ.

ಕನ್ನಡಪ್ರಭವಾರ್ತೆ ತಿಪಟೂರು

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ತನಿಖೆ ನಡೆಸಲು ರಾಜ್ಯ ಸರ್ಕಾರ ಶರವೇಗದಲ್ಲಿ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿತು. ಆದರೆ ಈಗ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರ ವಿರುದ್ದ ಷಡ್ಯಂತ್ರದ ಸಾಕ್ಷಿಗಳಿದ್ದರೂ ಎಸ್‌ಐಟಿ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು ಇದು ಸರ್ಕಾರದ ನಿರ್ಲಕ್ಷ್ಯ ಹಾಗೂ ಸರ್ಕಾರದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ನಿವೃತ್ತ ಎಸಿಪಿ ಲೋಕೇಶ್ವರ್‌ ಕಿಡಿಕಾರಿದರು. ನಗರದ ಖಾಸಗಿ ಹಾಲ್‌ನಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುರುಡೆ ಚಿನ್ನಯ್ಯ ಕೇವಲ ಗೊಂಬೆ ಅಷ್ಟೇ ಇದರ ಸೂತ್ರಧಾರಿಗಳು ಮಹೇಶ್‌ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತ ಭಟ್, ವಿಠ್ಠಲಗೌಡ ಮತ್ತಿತರರಿದ್ದು ಇವರು ಆಡಿಸಿದಂತೆ ಹಣದ ಆಸೆಗಾಗಿ ಚಿನ್ನಯ್ಯ ಆಡಿದ್ದಾರೆ. ಷಡ್ಯಂತ್ರದ ಭಾಗವಾಗಿರುವ ಚಿನ್ನಯ್ಯ ಎಲ್ಲಾ ಸತ್ಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರೂ ಅವರನ್ನು ಬಂಧಿಸಿಲ್ಲ. ಈಗ ತಲೆಮರೆಸಿಕೊಂಡಿರುವ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದು ಬಿಟ್ಟರೆ ಅವನನ್ನು ಹುಡುಕಿ ಬಂಧಿಸುವಲ್ಲಿ ಸರ್ಕಾರ ಹಾಗೂ ಎಸ್‌ಐಟಿ ವಿಫಲವಾಗಿದೆ. ಅವನ ವಿರುದ್ಧ ಸಾಕ್ಷಿಗಳಿದ್ದರೂ ತಪ್ಪಿಸಿಕೊಂಡು ಹೇಗೆ ಹೋದ ಎಂಬ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದು ಇದು ಸರ್ಕಾರ ಪಿತೂರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನರ ನಂಬಿಕೆಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇವರನ್ನು ಸುಮ್ಮನೆ ಬಿಡಬಾರದು. ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಸಿದ್ದು ಈಗ ರಾಜ್ಯದ ಜನರಿಗೆ ತಿಳಿದಿದೆ. ಪ್ರತಿ ದಿನ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಹೋಗಿ ಈ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಿರುಪತಿ, ಅಯ್ಯಪ್ಪಸ್ವಾಮಿ, ಶನಿಸಿಂಗಾಪುರದಲ್ಲಿಯೂ ಇಂತಹ ಪ್ರಕರಣ ನಡೆದಿದ್ದು ಸಮಾಜಘಾತಕರ ವಿರುದ್ಧ ಸರ್ಕಾರ ಶೀಘ್ರ ಕ್ರಮಕೈಗೊಳ್ಳದಿದ್ದರೆ ರಾಜ್ಯದಲ್ಲಿರುವ ದೊಡ್ಡ ದೊಡ್ಡ ಮಠಗಳ ವಿರುದ್ಧವೂ ಇಂತಹ ಷಡ್ಯಂತ್ರ ಮಾಡಿ ಕಪ್ಪುಚುಕ್ಕೆ ತರುವ ಕೆಲಸವನ್ನು ಮಾಡಲಿದ್ದಾರೆ. ಆದ್ದರಿಂದ ಸರ್ಕಾರ ನ್ಯಾಯಸಮ್ಮತ ತನಿಖೆ ಮಾಡಿ ಮಹೇಶ್ ಶೆಟ್ಟಿ ತಿಮ್ಮರೋಡಿ ಸೇರಿದಂತೆ ಹಲವರನ್ನು ಬಂಧಿಸಿ ಇಂತಹ ಪ್ರಕರಣ ಮುಂದೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.