ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸರ್ಕಾರದ ಕರ್ತವ್ಯ

| Published : Nov 05 2025, 01:15 AM IST

ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸರ್ಕಾರದ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಇನ್ನಷ್ಟು ಹೆಚ್ಚಿಸುವ ಸಲುವಾಗಿ, ಶಾಲಾವರಣದಲ್ಲಿ ಗ್ರಂಥಾಲಯ ಕೊಠಡಿ ನಿರ್ಮಾಣ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಕಲ್ಪಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಇನ್ನಷ್ಟು ಹೆಚ್ಚಿಸುವ ಸಲುವಾಗಿ, ಶಾಲಾವರಣದಲ್ಲಿ ಗ್ರಂಥಾಲಯ ಕೊಠಡಿ ನಿರ್ಮಾಣ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಕಲ್ಪಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಶಾಂತಿನಗರದ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಪಿಎಂಶ್ರೀ ಯೋಜನೆಯಡಿ 17.70 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಗ್ರಂಥಾಲಯ ಕೊಠಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಡಕುಟುಂಬದ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆರೋಗ್ಯ ಮತ್ತು ಆಹಾರ ಭದ್ರತೆ ಒದಗಿಸುವುದು ಜನಪ್ರತಿನಿಧಿ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಅದರಂತೆ ಮಕ್ಕಳ ಸಮಗ್ರ ವಿದ್ಯಾರ್ಜನೆಗೆ ಶಾಲೆಯಲ್ಲೇ ಗ್ರಂಥಾಲಯ ನಿರ್ಮಿಸಿದರೆ ಭವಿಷ್ಯದ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಹಕಾರಿ ಎಂದರು.ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು, ಪಾಲಕರು ಮಕ್ಕಳನ್ನು ಮೊದಲು ಶಿಕ್ಷಿತರಾಗಿಸಬೇಕು. ಅಂಬೇಡ್ಕರ್ ತತ್ವದಡಿ ಶಿಕ್ಷಣ ಎಂಬುದು ಹುಲಿ ಹಾಲಿನಂತೆ, ಹಾಲು ಕುಡಿದ ಹುಲಿಮರಿ ಘರ್ಜಿಸಿದಂತೆ, ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹುಲಿಮರಿಯಂತೆ ಘರ್ಜಿಸಬೇಕು. ಹಾಗಾಗಿ ಮಕ್ಕಳಿಗೆ ಶಿಕ್ಷಣವಂತರಾಗಿಸುವುದು ಪಾಲಕರ ಕರ್ತವ್ಯ ಎಂದರು.ಶಿಕ್ಷಣ ಕೇವಲ ಸರ್ಕಾರಿ ನೌಕರಿಗಲ್ಲ ಅಥವಾ ಬದುಕಿಗಲ್ಲ, ಶಿಕ್ಷಣ ಉತ್ತಮ ಸಂಸ್ಕಾರ, ಬುದ್ಧಿವಂತಿಕೆ ಹಾಗೂ ಅರಿವು ಮೂಡಿಸುವ ಸಾಧನ. ಹೀಗಾಗಿ ಮಕ್ಕಳು ಸಂಸ್ಕಾರವಂತರಾದರೆ ಪಾಲಕರು, ಶಿಕ್ಷಣ ಕಲಿಸಿದ ಗುರುಗಳ ಜೊತೆಗೆ ಸವಲತ್ತು ಕಲ್ಪಿಸುವ ಸರ್ಕಾರಕ್ಕೂ ಹೆಸರು ಬರಲಿದೆ. ಜೊತೆಗೆ ಮಕ್ಕಳು ದೇಶದ ಸತ್ರ್ಪಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದರು.ಭಾರತ ಇಡೀ ಪ್ರಪಂಚವನ್ನೇ ತಿರುಗುವಂತೆ ಮಾಡಿರುವ ರಾಷ್ಟ್ರ. ಈ ನಡುವೆ ಪಿಎಂಶ್ರೀ ಯೋಜನೆ ಪ್ರಧಾನಿಗಳು ವಿಶೇಷವಾಗಿ ದೇಶಾದ್ಯಂತ ಅನುಷ್ಠಾನಗೊಳಿಸಿದ್ದು, ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ನಗರಸಭೆ ಸದಸ್ಯರು ಮಕ್ಕಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಗ್ರಂಥಾಲಯ ನಿರ್ಮಾಣಗೊಂಡರೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಹೀಗಾಗಿ ಪ್ರಧಾನ ಮಂತ್ರಿಗಳ ಈ ಯೋಜನೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಣಿಕಂಠ, ಮುನೀರ್‌ಅಹ್ಮದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಜಮ್, ಉಪಾಧ್ಯಕ್ಷೆ ಶೃತಿ, ಸಿಡಿಎ ಸದಸ್ಯೆ ಗುಣವತಿ, ಸದಸ್ಯ ತಬಸೂಮ್, ಷರೀಫ್, ಪಿಎಂಶ್ರೀ ಸ.ಕ.ಹಿ.ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಟಿ.ಚಂದ್ರಯ್ಯ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತ ಚೇತನ್, ಗುತ್ತಿಗೆದಾರ ಪ್ರದೀಪ್, ಶಿಕ್ಷಣ ಸಂಯೋಜಕಿ ಜಾನಕಮ್ಮ, ಸಿಆರ್‌ಪಿ ರಮ್ಯಶ್ರೀ ಮತ್ತಿತರರು ಹಾಜರಿದ್ದರು.