ಪ್ರಜಾ ಸೇವಾ ಅಭಿಯಾನದ ಅಂಗವಾಗಿ ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ
ಕೂಡ್ಲಿಗಿ: ಪ್ರತಿಯೊಬ್ಬರ ಆಸ್ತಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಭೂಮಿ ಗ್ಯಾರಂಟಿ ಯೋಜನೆಯಡಿ ತಾಲೂಕಿನಲ್ಲಿ ಈಗಾಗಲೇ 25,276 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಆಸ್ತಿಗಳ ಅಳತೆ ಮಾಡಿ, ಮಾಲೀಕರ ಭಾವಚಿತ್ರದೊಂದಿಗೆ ಇ-ಖಾತೆ ದಾಖಲೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ಈ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಶನಿವಾರ ಕೂಡ್ಲಿಗಿಯಲ್ಲಿ ನಡೆದ ಪ್ರಜಾಸೇವಾ ಇಲಾಖೆ ಉದ್ಘಾಟನೆಯ ನಂತರ ಮಾತನಾಡಿದ ಅವರು, ಬಡವರು ಮತ್ತು ಶಕ್ತಿ ಇಲ್ಲದವರಿಗೆ ನೆರವಾಗಲು ಉಚಿತ ಸರ್ಕಾರಿ ವಕೀಲರ ಸೌಲಭ್ಯ ಸೇರಿದಂತೆ ಕಾನೂನು ನೆರವು ನೀಡುವ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದರು.ಪ್ರಜಾ ಸೇವಾ ಅಭಿಯಾನದ ಅಂಗವಾಗಿ ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ. ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯ, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆ ಹಾಗೂ ನಿವೇಶನಕ್ಕೆ ಸಂಬಂಧಿಸಿದ ಅರ್ಜಿ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಸೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು ಎಂದರು.
ಇದೇ ವೇಳೆ ಹಳ್ಳಿಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ನಾಯಕತ್ವದ ಪ್ರತಿಭೆ ಹೊರ ತರುವ ಮತ್ತು ಪ್ರಜಾಪ್ರಭುತ್ವದ ಆಶಯ ಬಲಪಡಿಸುವ ಉದ್ದೇಶದಿಂದ ಭಾರತ್ ಜೋಡೋ ಯುವಕ ಸಂಘ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ಪ್ರತಿ ಪಂಚಾಯಿತಿಯಲ್ಲೂ ಗ್ಯಾರಂಟಿ ಯೋಜನೆಗಳ ಸಮಿತಿ ರಚಿಸಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.